ಉಮೇಶ್ ಕೊಲೆ : ನಾಲ್ವರ ಬಂಧನ ?

ಉಮೇಶ್ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ (29) ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂದಿಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ಆರೋಪಿಗಳು ಕಿನ್ನಿಗೋಳಿ, ನಿಡ್ಡೋಡಿ ಆಸು ಪಾಸಿನವರಾಗಿದ್ದು, ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಕಿನ್ನಿಗೋಳಿಯ ಕೊಡೆತ್ತೂರು ಪರಿಸರದವರಾಗಿದ್ದರೆ ಉಳಿದಿಬ್ಬರು ನಿಡ್ಡೋಡಿ ಪರಿಸರದವರಾಗಿದ್ದಾರೆ. ಎರಡು ದಿನಗಳಲ್ಲಿ ಸಂಪೂರ್ಣ ಚಿತ್ರಣ ಬಯಲಾಗಲಿದೆ ಎಂದು ತಿಳಿದುಬಂದಿದೆ.

ಕ್ವಾರಿ ಮತ್ತು ಜಾಗದ ಡೀಲಿಂಗಿಂದ ಕೊಲೆ

ಕಿಲೆಂಜೂರು ರಾಮಕೃಷ್ಣ ಶೆಟ್ಟಿ ಹಾಗೂ ಪ್ರಭಾವತಿ ಶೆಟ್ಟಿ ಮಗನಾದ ಉಮೇಶ್ ಸ್ಥಳೀಯವಾಗಿ ಉತ್ತಮ ನಡತೆಯುಳ್ಳವರಾಗಿದ್ದು, ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮ ಪಾಡಿಗೆ ವ್ಯವಹಾರ ಮಾಡಿಕೊಂಡಿದ್ದರು. ಮೂರು ವರ್ಷದ ಹಿಂದೆ ಮುಂಬಯಿಂದ ಊರಿಗೆ ಆಗಮಿಸಿ ಕಳೆದ ಕೆಲವು ತಿಂಗಳಿನಿಂದ ಪಣಂಬೂರಿನ ಟ್ರಾನ್ಸ್‍ಫೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ವಾರದ ಹಿಂದೆ ತನ್ನ ಗೆಳೆಯರೊಂದಿಗೆ ತಾನು ಕ್ವಾರಿ ಉದ್ಯಮ ಪ್ರಾರಂಭಿಸುವ ಇರಾದೆಯಿದೆ ಎಂದು ತಿಳಿಸಿದ್ದರು. ಕ್ವಾರಿ ಉದ್ಯಮ ಮತ್ತು ಜಾಗದ ವಹಿವಾಟು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಎರಡು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿದೆ.