ಶುಂಠಿಕೊಪ್ಪ : ಪಾಕ್ ವಿಜಯವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ ನಾಲ್ಕು ಮಂದಿ ಬಂಧನ

ಶುಂಠಿಕೊಪ್ಪ : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಫೈನಲಿನಲ್ಲಿ  ಭಾರತದ ವಿರುದ್ಧ ಪಾಕಿಸ್ತಾನ ಸಾಧಿಸಿದ ಗೆಲುವನ್ನು ಆಚರಿಸಿದ ನಾಲ್ಕು ಮಂದಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಿಯಾಜ್, ಸಮದ್, ಮುನೀರ್ ಹಾಗೂ ಜಬೀರ್  ಎಂದು ಗುರುತಿಸಲಾಗಿದೆ. ಅವರಲ್ಲಿ ರಿಯಾಜ್ ಎಂಬವನು ಇಲಾನೆ ಹೊಸಕೋಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುನ್ಹಿ ಕುಟ್ಟಿ ಅವರ ಮಗನಾಗಿದ್ದಾನೆ.

ಪಾಕಿಸ್ತಾನ ಪಂದ್ಯ ಗೆದ್ದ ಕೂಡಲೇ ಆರೋಪಿಗಳು ತಮ್ಮ ಸ್ಕೂಟರ್ ಹಾಗೂ ಮಾರುತಿ ವ್ಯಾನ್ ಒಂದರಲ್ಲಿ ಹೊಸಕೋಟೆ ಜಂಕ್ಷನ್ನಿಗೆ ರಾತ್ರಿ 10.30ರ ಸುಮಾರಿಗೆ ಬಂದು ಅಲ್ಲಿ ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗಿ ನಂತರ ಅಲ್ಲಿಂದ ಕೂಡಲೇ ಪರಾರಿಯಾಗಲು ಯತ್ನಿಸಿದ್ದರೂ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದರು. ನಾಲ್ಕು ಮಂದಿಯನ್ನೂ ಪೊಲೀಸರು ನಂತರ ವಶಪಡಿಸಿಕೊಂಡಿದ್ದರು.

ರವಿವಾರ ರಾತ್ರಿಯ ಈ ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆಯೇ ಸೋಮವಾರ ಬೆಳಿಗ್ಗೆ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು  ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ  ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ ಭಿ ಭಾರತೀಶ್, ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಡಿ ನರಸಿಂಹ ಮತ್ತಿತರರು ಲಿಖಿತ ದೂರೊಂದನ್ನೂ ಸಲ್ಲಿಸಿದರು.

ನಂತರ ಕನ್ನಡ ಸರ್ಕಲ್ ಸಮೀಪ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದರೂ  ಕುಶಾಲನಗರ ಡಿವೈಎಸ್ಪಿ ಸಂಪತ್ ಕುಮಾರ್ ಹಾಗೂ  ಸರ್ಕಲ್ ಇನಸ್ಪೆಕ್ಟರ್ ಕ್ಯಾತೇ ಗೌಡ ಅವರ ಜತೆ ಮಾತನಾಡಿ,  ಐಪಿಸಿ ಸೆಕ್ಷನ್ 153ಬಿ ಹಾಗೂ 295ಎ ಅನ್ವಯ ಪ್ರಕರಣ ದಾಖಲಿಸುವುದಾಗಿ ಆಶ್ವಾಸನೆ ನೀಡಿದರು.

ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೇಲಿನಕುರುವಳ್ಳಿ ಎಂಬಲ್ಲಿ ಜಬಿ ಖುರೇಶಿ ಎಂಬ ಯುವಕನೊಬ್ಬ ಪಾಕಿಸ್ತಾನವನ್ನು ವಿಜಯಕ್ಕಾಗಿ ಅಭಿನಂದಿಸಿ “ವಿ ಆರ್ ಚಾಂಪಿಯಯನ್ಸ್ ” ಎಂದು ಫೇಸ್ಬುಕ್ ಪೋಸ್ಟ್ ಒಂದನ್ನು ಮಾಡಿದ್ದು ಕೂಡ ಉದ್ವಿಗ್ನತೆಗೆ ಕಾರಣವಾಯಿತು.