ಯುವಕರ ಮಾತಿನ ಚಕಮಕಿ ಹೊಡೆದಾಟದಲ್ಲಿ ಮುಕ್ತಾಯ

ಸಾಂದರ್ಭಿಕ ಚಿತ್ರ

4 ಜನರ ಬಂಧನ

ಕುಮಟಾ : ಪಟ್ಟಣದ ಚಿತ್ರಗಿ ರಸ್ತೆಯ ಕಲಶಂಕ ಸಮೀಪದ ಸ್ಟಾರ್ ಚಿಕನ್ ಸೆಂಟರ್ ಬಳಿ ರವಿವಾರ 4 ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಟದಲ್ಲಿ ಪರ್ಯಾವಸಾನಗೊಂಡಿದ್ದು, ಮಾಹಿತಿ ಪಡೆದ ಪೊಲೀಸರು 4 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಸ್ಟಾರ್ ಚಿಕನ್ ಸೆಂಟರ್ ಮಾಲಕ ಆಮೀನ್ ಹಾಗೂ ಆತನ ಸಂಬಂಧಿಗಳಾದ ಅನೀಶ್, ಅಕ್ಬರ್ ಹಾಗೂ ದಿನೇಶ ನಾಯ್ಕ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಇವರೆಲ್ಲರೂ ಮಾಸೂರ ಕ್ರಾಸ್ ಜನತಾ ಪ್ಲಾಟ್ ನಿವಾಸಿಗಳಲ್ಲದೇ ಚಿರಪರಿಚಿತರಾಗಿದ್ದರು. ದಿನೇಶ ನಾಯ್ಕ ಎನ್ನುವವರು ತನ್ನ ಬೈಕಿನಲ್ಲಿ ಸ್ಟಾರ್ ಚಿಕನ್ ಸೆಂಟರ್ ಎದುರು ನಿಂತ ಸಂದರ್ಭದಲ್ಲಿ ಯುವಕರ ಮಧ್ಯೆ ಹೊಡೆದಾಟ ನಡೆದಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, 4 ಜನರನ್ನು ಬಂಧಿಸಿ, ದೂರು-ಪ್ರತಿದೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಈದ್ ಮಿಲಾದುನ್ ನಬಿ ಆಚರಣೆಯ ಸಂಬಂಧ ಎರಡು ಕೋಮುಗಳ ಮಧ್ಯೆ ನಡೆದ ಗಲಭೆಯ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡ ಪೊಲೀಸರು ಈ 4 ಜನರ ಹೊಡೆದಾಟದ ಸಂಬಂಧ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.