ಭದ್ರತೆ ಇಲ್ಲದ ಪುತ್ತೂರಿನ ಈಜುಕೊಳದಲ್ಲಿ 3ನೇ ಸಾವು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಇಲ್ಲಿನ ದರ್ಬೆ ಬೈಪಾಸ್ ಬಳಿ ಇರುವ ಖಾಸಗಿ ವ್ಯಕ್ತಿಯೋರ್ವರ ಈಜುಕೊಳದಲ್ಲಿ ಕ್ರೀಡಾಪಟು ವಿದ್ಯಾರ್ಥಿಯೊಬ್ಬ ಮಂಗಳವಾರ ಈಜುವ ವೇಳೆ ಮುಳುಗಿ ಮೃತಪಟ್ಟಿದ್ದು ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಒಟ್ಟು ಇದೇ ಈಜುಕೊಳದಲ್ಲಿ ಮೂರು ಮಂದಿ ಮೃತಪಟ್ಟಂತಾಗಿದೆ.

ಮೂಲತಃ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ತೊಟ್ಲ ನಿವಾಸಿಯಾಗಿದ್ದು, ಪ್ರಸ್ತುತ ಅಲಂಕಾರಿನಲ್ಲಿ ವಾಸ್ತವ್ಯವಿರುವ  ಗಂಗಾಧರ ರೈ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ರೈ (19) ಮೃತಪಟ್ಟ ಯುವಕ. ಕ್ರಿಕೆಟ್ ಆಟಗಾರನಾಗಿದ್ದ ಕಾರ್ತಿಕ್ ರೈ ಅವರು ಮಂಗಳೂರು ವಿ ವಿ ತಂಡ ಸದಸ್ಯರಾಗಿದ್ದು,  ಎಂಪಿಎಲ್ ಪಂದ್ಯಾಟ ಆಡಲು ಅಭ್ಯಾಸ ನಡೆಸುತ್ತಿದ್ದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ತನ್ನ ಸ್ನೇಹಿತರ ಜೊತೆ ರಜೆಯ ಸಂದರ್ಭದಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಪುತ್ತೂರಿನಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ ಬಳಿಕ ಕಾರ್ತಿಕ್ ತನ್ನ ಸಹಪಾಠಿಗಳಾದ ಭುವನೇಂದ್ರ ಹಾಗೂ ಸಾಗರ್ ಎಂಬವರ ಜೊತೆ ದರ್ಬೆ ಬೈಪಾಸ್ ರಸ್ತೆಯ ಸಮೀಪವಿರುವ ಕುಶಾಲಪ್ಪ ಅಭಿಕಾರ್ ಎಂಬವರ ಒಡೆತನದ ಎ ಎಸ್ ಆರ್ ಈಜುಕೊಳಕ್ಕೆ ಈಜಲು ಹೋಗಿದ್ದರು.

kartik-rai-puttur1

ಇದೇ ಈಜುಕೊಳದಲ್ಲಿ ಇದೇ ವರ್ಷ ಇಬ್ಬರು ಬಾಲಕರು ಮೃತಪಟ್ಟಿದ್ದರು. ಕಳೆದ ಕೆಲವು ದಿನಗಳ ಹಿಂದೆ ಬಾಲಕನೋರ್ವ ಈಜಾಡಲು ಹೋಗಿ ಸುಸ್ತಾಗಿ ನೀರಿನಲ್ಲಿ ಮುಳುಗಿದ್ದು ಬಳಿಕ ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಈಜುಕೊಳದಲ್ಲಿ ಯಾವುದೇ ಮೂಲಭೂತ ವ್ಯವಸ್ಥೆಯಿಲ್ಲ ಮತ್ತು ಈಜುತರಬೇತುದಾರರು ಇಲ್ಲ ಎನ್ನಲಾಗಿದೆ. ಈಜುಕೊಳದಲ್ಲಿ ಇರಬೇಕಾದ ಟ್ಯೂಬ್ ಹಾಗೂ ಮುಳುಗುವ ವೇಳೆ ಸುರಕ್ಷಾ ವ್ಯವಸ್ಥೆ ಇಲ್ಲ ಮತ್ತು ಮೇಲುಸ್ತುವಾರಿ ವ್ಯವಸ್ಥೆ ಇಲ್ಲದೇ ಇರುವುದು ಪದೇ ಪದೇ ಈಜಲುಹೋದವರು ಸಾವನ್ನಪ್ಪಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದು ತಕ್ಷಣವೇ ಈಜುಕೊಳವನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಈಜುತ್ತಿರುವಾಗಲೇ ಮುಳುಗಿದ

ಕಾರ್ತಿಕ್ ಈಜು ಬಲ್ಲವರಾಗಿದ್ದು, ಆರಂಭದಲ್ಲಿ ಈಜು ಕೊಳಕ್ಕಿಳಿದು ತನ್ನ ಸಹಪಾಠಿಗಳ ಜೊತೆ ಈಜಾಡಿದ್ದ. ಅವರು  ಈಜು ಕೊಳದಿಂದ ಮೇಲಕ್ಕೇರಿದ ಸಂದರ್ಭದಲ್ಲಿ ಸುಸ್ತಾದವರಂತೆ ಕಂಡು ಬಂದಿದ್ದರು. ಸುಸ್ತಾಗಿದ್ದ ಕಾರ್ತಿಕ್ ನೀರಿನಲ್ಲಿ ಮುಳುಗಿತ್ತಿದ್ದಾನೆ ಎಂಬ ವಿಚಾರ ಸಹಪಾಠಿಗಳ ಗಮನಕ್ಕೆ ಬರಲಿಲ್ಲ. ಮುಳುಗುತ್ತಿದ್ದ ಆತನಿಗೆ ಹಿಡಿದುಕೊಳ್ಳಲು ಯಾವುದೇ ವ್ಯವಸ್ಥೆಯೂ ಇರದ ಕಾರಣ ಸುಮಾರು 8 ಅಡಿ ಆಳದಲ್ಲಿ ಆತ ಮುಳುಗಿದ. ಮುಳುಗುವಾಗಲೂ ತನ್ನ ಕಾಲುಗಳನ್ನು ಬಡಿಯುತ್ತಲೇ ಇದ್ದ ಎನ್ನಲಾಗಿದೆ.

ಆದರೆ ಆತ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು ಹೃದಾಯಾಘಾತವಾದರೆ ಆತನಿಗೆ ಕಾಲುಗಳನ್ನು ಬಡಿಯಲು ಸಾಧ್ಯವೇ ಎಂದು ಕೆಲವರು ಹೇಳುತ್ತಿದ್ದಾರೆ. ಈಜಕೊಳದ ದೃಶ್ಯಗಳು ಸೀಸಿ ಕೆಮರಾದಲ್ಲಿ ದಾಖಲಾಗಿದ್ದು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಬಹುದು.

ಸ್ಥಳಕ್ಕೆ ಭೇಟಿ ನೀಡಿ ಸೀಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದ ಪುತ್ತೂರು ನಗರ ಠಾಣೆಯ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್, ಇದೊಂದು ಅಸಹಜ ಸಾವಿನ ಪ್ರಕರಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದಾಗ್ಯೂ ಪುತ್ತೂರು ನಗರ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.