ಕಾಲೇಜು ಪ್ರವಾಸದ ಬಸ್ ಪಲ್ಟಿ : 39 ವಿದ್ಯಾರ್ಥಿ, ಶಿಕ್ಷಕರಿಗೆ ಗಾಯ

ಕೋಝಿಕ್ಕೋಡ್ : ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವಾಸ ಕೈಗೊಂಡಿದ್ದ ಖಾಸಗಿ ಬಸ್ಸೊಂದು ಮೈಸೂರಿಗೆ ಭೇಟಿ ನೀಡಿ ಕೇರಳಕ್ಕೆ ಮರಳುತ್ತಿದ್ದಾಗ ಕೊಡುವೇಲಿಗೆ ಹತ್ತಿರದ ಪದನಿಲಂನಲ್ಲಿ ನಿನ್ನೆ ಮುಂಜಾನೆ ಉರುಳಿಬಿದ್ದ ದುರಂತದಲ್ಲಿ 39 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆ ದಾಖಲಾಗಿರುವ ವಿದ್ಯಾರ್ಥಿಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಿರುವನಂತಪುರಂನ ಅಟ್ಟಿಂಗಲ್ ಸರ್ಕಾರಿ ಕಾಲೇಜಿನವರಾಗಿದ್ದರು.

ಬಸ್ಸಿನಲ್ಲಿ ಸುಮಾರು 40 ವಿದ್ಯಾರ್ಥಿಗಳಿದ್ದರು. ಗಾಯಗೊಂಡಿರುವ 18 ವಿದ್ಯಾರ್ಥಿಗಳನ್ನು ಕೋಝಿಕ್ಕೋಡ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದ್ದು, ಇವರನ್ನು ಕೊಡುವೇಲಿಯ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಬಹುತೇಕ ವಿದ್ಯಾರ್ಥಿಗಳು ಬಿಡುಗಡೆ ಹೊಂದಿದ್ದಾರೆ.

ಅತಿಯಾದ ವೇಗವೇ ಬಸ್ ಪಲ್ಟಿ ಹೊಡೆಯಲು ಕಾರಣವಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಬಸ್ಸಿನಲ್ಲಿ ಸಿಲುಕಿದವರನ್ನು ಹೊರತೆಗೆಯಲು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿದ್ದಾರೆ.