35 ಗ್ರಾಮಲೆಕ್ಕಿಗರ ಆಯ್ಕೆ ಆದೇಶ

ಹೊರ ಜಿಲ್ಲೆಯವರೇ ಹೆಚ್ಚು

ವಿಶೇಷ ವರದಿ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಲಿ ಉಳಿದಿರುವ ಹಲವಾರು ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಧಿಕಾರಿ ನೇತೃತ್ವದ ಆಯ್ಕೆ ಸಮಿತಿ 35 ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಿದ್ದು, ಬಹುಪಾಲು ಮಂದಿ ಅಭ್ಯರ್ಥಿಗಳು ಹೊರ ಜಿಲ್ಲೆಯವರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ ಮಾಡಲು ಹೊರ ಜಿಲ್ಲೆಯ 21 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಆಯ್ಕೆಯಾದವರಲ್ಲಿ ಬಳ್ಳಾರಿ ಮತ್ತು ಬಿಜಾಪುರ ಜಿಲ್ಲೆಯವರು ಸಂಖ್ಯೆಯಲ್ಲಿದ್ದು, ಇನ್ನುಳಿದಂತೆ ಉಡುಪಿ, ದಾವಣಗೆರೆ, ರಾಯಚೂರು, ಗದಗ, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಯವರು ಸೇರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯವರು ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಹಾಕಿದ್ದರು. ಬಳ್ಳಾರಿ ಜಿಲ್ಲೆಯಿಂದ ಆಯ್ಕೆಯಾದ ಆರು ಮಂದಿಯಲ್ಲಿ ಐದು ಮಂದಿ ಕೂಡ್ಲಿಗಿ ಎಂಬ ಒಂದೇ ತಾಲೂಕಿಗೆ ಸೇರಿದವರಾಗಿರುವುದು ಗಮನಾರ್ಹವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಬುಧವಾರ ಹೊಸದಾಗಿ ಆಯ್ಕೆಯಾದ 35 ಮಂದಿ ಗ್ರಾಮ ಲೆಕ್ಕಿಗರ ಪಟ್ಟಿಯನ್ನು ಪ್ರಕಟಿಸಿದ್ದು, ಯಾವುದೇ ಆಕ್ಷೇಪಗಳಿದ್ದರೆ ದೂರು ನೀಡಲು ಸಮಯಾವಕಾಶ ನೀಡಲಾಗಿದೆ.

ಆಯ್ಕೆಯಾದವರಲ್ಲಿ ಮಹಿಳೆಯರು ಸೇರಿದ್ದು, ಸೇವಾ ನಿವೃತ್ತರ ಹೊರತಾಗಿ ಉಳಿದ ಎಲ್ಲ ಅಭ್ಯರ್ಥಿಗಳು ಯುವಕರಾಗಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಮತ್ತು ಕಂದಾಯ ಇಲಾಖೆ ಕಚೇರಿಗಳಲ್ಲಿ ಗ್ರಾಮ ಲೆಕ್ಕಿಗರ ಕೊರತೆ ಇದ್ದು, ಒಬ್ಬನೇ ಗ್ರಾಮ ಲೆಕ್ಕಿಗ ಮೂರರಿಂದ ನಾಲ್ಕು ಗ್ರಾಮಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಇದರಿಂದಾಗಿ ಭ್ರಷ್ಟಚಾರಕ್ಕೆ ಆಸ್ಪದವಾಗಿದ್ದು, ಶ್ರೀಮಂತ ಕುಳಗಳ ಕೈಗೆ ಮಾತ್ರ ಇಂದು ಗ್ರಾಮದ ವಿಎ ಸಿಗುತ್ತಾನೆ ಎನ್ನಲಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇರ ನೇಮಕಾತಿ ನಡೆಯುತ್ತಿದ್ದು, ಹೈಸ್ಕೂಲಿನಲ್ಲಿ ಪಡೆಯಲಾದ ಮಾರ್ಕ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿ ಆಯ್ಕೆಯಾದ ಕೆಲವು ಮಂದಿ ಅಭ್ಯರ್ಥಿಗಳು ನಕಲಿ ಮಾರ್ಕ್ ಕಾರ್ಡ್ ಸಲ್ಲಿಸಿ ಪಾಸ್ ಆಗಿದ್ದರು. ಅವರ ವಿರುದ್ಧ ಕ್ರಿಮಿನಲ್ ಕೇಸು ಕೂಡ ದಾಖಲಿಸಲಾಗಿತ್ತು.