ದ ಕ ಜಿಲ್ಲೆಯ ಹೆದ್ದಾರಿ ಪಕ್ಕದ 316 ಮದ್ಯದಂಗಡಿ ಮುಚ್ಚುವ ಭೀತಿಯಲ್ಲಿ

ಸಾಂದರ್ಭಿಕ ಚಿತ್ರ

ಸುಪ್ರೀಂ ಆದೇಶ ಪರಿಣಾಮ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮದ್ಯಪಾನ ಮಾಡಿ ಚಾಲನೆ ಮಾಡುವುದರಿಂದ ಉಂಟಾಗುತ್ತಿರುವ ರಸ್ತೆ ದುರಂತಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ಹೊರಡಿಸಿದ ಆದೇಶ ಇದೀಗ ಮದ್ಯದಂಗಡಿ ಮಾಲಕರನ್ನು ಕಂಗೆಡುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಹೆದ್ದಾರಿ ಪಕ್ಕದ ಮದ್ಯದಂಗಡಿಗಳನ್ನು ಸುಪ್ರೀಂ ಆದೇಶದಂತೆ ತೆರವುಗೊಳಿಸಬೇಕಾಗಿದೆ. ಹೀಗಾಗಿ ದ ಕ ಜಿಲ್ಲೆಯಲ್ಲಿ ಸುಮಾರು 316 ಮದ್ಯದಂಗಡಿಗಳು ಮುಚ್ಚುವ ಭೀತಿಯಲ್ಲಿವೆ.

ಮಂಗಳೂರಿನಲ್ಲಿ 196, ಬಂಟ್ವಾಳದಲ್ಲಿ 33, ಸುಳ್ಯದಲ್ಲಿ 21, ಪುತ್ತೂರು 42 ಮತ್ತು ಬೆಳ್ತಂಗಡಿಯಲ್ಲಿ 24 ಮದ್ಯದಂಗಡಿಗಳಿವೆ. ಆದೇಶ ಕಟ್ಟುನಿಟ್ಟಾಗಿ ಜಾರಿಯಾದರೆ ಇವೆಲ್ಲವೂ ಬಾಗಿಲು ಹಾಕಲಿವೆ.

ರಾಜ್ಯ ಸರಕಾರದ ನಿಯಮದಂತೆ ಹೊರ ವ್ಯಾಪ್ತಿಯಲ್ಲಿ ಇಲ್ಲವೇ 220 ಮೀಟರಿಗಿಂತ ದೂರದಲ್ಲಿ ಮದ್ಯಮಾರಾಟ ಮಾಡಬಹುದು ಎಂಬ ನಿಯಮವಿದೆ. ಸುಪ್ರೀಂ ಆದೇಶದನ್ವಯ 500 ಮೀಟರ್ ವ್ಯಾಪ್ತಿಯೊಳಗಿನ ಅಂಗಡಿಗಳು ಮುಚ್ಚಬೇಕಾಗಿದೆ. ಅಲ್ಲದೆ ಕೆಲವು ಹೆದ್ದಾರಿಗಳು ನಗರ ಪಾಲಿಕೆ, ಪುರಸಭೆ ವ್ಯಾಪ್ತಿ ಮೂಲಕವೂ ಹಾದು ಹೋಗುವ ಹಿನ್ನೆಲೆಯಲ್ಲಿ ಇಲ್ಲಿನ ಮದ್ಯದಂಗಡಿಗಳಿಗೆ ಈ ನಿಯಮ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ.

ಪ್ರತೀ ವರ್ಷ ಸುಮಾರು 1.5 ಲಕ್ಷ ಮಂದಿ ಹೆದ್ದಾರಿಗಳಲ್ಲಿ ನಡೆಯುವ ರಸ್ತೆ ದುರಂತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಸುಪ್ರೀಂ ಕೋರ್ಟಿನ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶ ಕೆ ಎಸ್ ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಿತಿಯೊಂದನ್ನು ಕೂಡಾ ಸುಪ್ರೀಂ ಕೋರ್ಟ್ ನಿಯೋಜನೆ ಮಾಡಿದೆ.

ಹೆದ್ದಾರಿಯ 500 ಮೀಟರ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡಾ ಮದ್ಯದ ಅಂಗಡಿಗಳಿದ್ದರೆ ಅವುಗಳನ್ನು ಮುಚ್ಚಬೇಕೆಂದು ಹೇಳಿದೆ. ತೆರವುಗೊಳಿಸಲು 2017ರ ಎಪ್ರಿಲ್ 1ರವರೆಗೆ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ.