ಶಬರಿಮಲೆ : ಕಬ್ಬಿಣದ ಬೇಲಿ ಕುಸಿದು 31 ಮಂದಿ ಗಾಯ

ಆಸ್ಪತ್ರೆಯಲ್ಲಿ ಅಯ್ಯಪ್ಪ ಭಕ್ತರು

ಶಬರಿಮಲೈ : ಶಬರಿಮಲ ಸನ್ನಿಧಾನದಲ್ಲಿ ಈಗ ನಡೆಯುತ್ತಿರುವ ವಾರ್ಷಿಕ ಮಂಡಲಂ ಉತ್ಸವದ ವೇಳೆ ಸಂಭವಿಸಿದ ಭಕ್ತರ ಕಾಲ್ತುಳಿತದಲ್ಲಿ 31 ಮಂದಿ ಗಾಯಗೊಂಡಿದ್ದು, ಇವರಲ್ಲಿ 12 ಮಂದಿಯ ಸ್ಥಿತಿ ಗಂಭೀರವಾಗಿದೆ.

ನಿನ್ನೆ ಸಂಜೆ 6.40ಕ್ಕೆ ದೀಪಾರಾಧನೆ ನಡೆದ ಬಳಿಕ ಭಕ್ತರು ಸಾಗುವ ಮಲಿಕಪ್ಪುರಂನಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಬೇಲಿ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಸುಮಾರು ಏಳು ತಾಸು ಪೂಜೆಗಾಗಿ ಕಾದಿದ್ದ ಸಾವಿರಾರು ಭಕ್ತರು ಮಂದಿರದತ್ತ ಸಾಗಿದಾಗ ಬ್ಯಾರಿಕೇಡಿನಂತೆ ಅಳವಡಿಸಲಾಗಿದ್ದ ಭಾರವಾದ ಕಬ್ಬಿಣದ ಬೇಲಿ ಕುಸಿದು ಒಮ್ಮಲೇ ಬಿದ್ದಿದೆ. ಇದು ಕೆಲವರ ಮೈಮೇಲೆಯೇ ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಘಟನೆ ನಡೆದ ತಕ್ಷಣ ಪೊಲೀಸರು ಭಕ್ತರ ರಕ್ಷಣೆಗೆ ಧಾವಿಸಿ ಬಂದಿದ್ದರು. ಗಾಯಗೊಂಡ ಎಲ್ಲರನ್ನು ಸನ್ನಿಧಾನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ವೈದ್ಯರ ಸಲಹೆ ಮೇರೆಗೆ ಗಂಭೀರ ಗಾಯಗೊಂಡ ಎಂಟು ಮಂದಿಯನ್ನು ಕೊಟ್ಟಾಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡವರಲ್ಲಿ ತಮಿಳುನಾಡು, ಆಂಧ್ರ, ಕರ್ನಾಟಕ ಮತ್ತು ತೆಲಂಗಾಣದ ಅಯ್ಯಪ್ಪ ಮಾಲಾಧಾರಿಗಳು ಒಳಗೊಂಡಿದ್ದಾರೆ.