ಪಾಕ್ : ಕ್ರಿಸ್ಮಸ್ ಪಾರ್ಟಿಯಲ್ಲಿ ಮದ್ಯ ಸೇವಿಸಿ 31 ಸಾವು

ಇಸ್ಲಾಮಾಬಾದ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಟೊಬಾ ಟೇಕ್ ಸಿಂಗ್ ಎಂಬ ಪುಟ್ಟ ಗ್ರಾಮದಲ್ಲಿ ಕ್ರಿಸ್ಮಸ್ ಪಾರ್ಟಿಯೊಂದರ ಸಂದರ್ಭ ವಿಷಪೂರಿತ ಮದ್ಯ ಸೇವನೆಯಿಂದ ಕನಿಷ್ಠ 31 ಜನ ಮೃತಪಟ್ಟರೆ  60 ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕ್ರಿಸ್ಮಸ್ ಪಾರ್ಟಿ ಮುಗಿಸಿ ಹೆಚ್ಚಿನವರು ಮನೆಗೆ ಮರಳಿದ್ದರೆ ಮರು ದಿನ ಬೆಳಿಗ್ಗೆ ಅವರೆಲ್ಲರೂ ಅಸೌಖ್ಯಪೀಡಿತರಾಗಿ ಹಾಸಿಗೆಯಿಂದ ಏಳುವ ಸ್ಥಿತಿಯಲ್ಲಿರಲಿಲ್ಲ. ಹೆಚ್ಚಿನವರನ್ನು ಫೈಸಲಾಬಾದ್  ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಡೆದ ಗ್ರಾಮದ ಹೆಚ್ಚಿನವರು ಕ್ರೈಸ್ತರಾಗಿದ್ದು, ಅಧಿಕಾರಿಗಳಿಗೆ ಗ್ರಾಮದಲ್ಲೆಲ್ಲೂ ಮದ್ಯದ ಬಾಟಲಿಗಳು ಪತ್ತೆಯಾಗಿರದೇ ಇರುವುದರಿಂದ ಗ್ರಾಮಸ್ಥರು ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸಿರಬೇಕೆಂದು ಅಂದಾಜಿಸಲಾಗಿದೆ.

ಪಾಕಿಸ್ತಾನದಲ್ಲಿ ಮುಸ್ಲಿಮರಿಗೆ ಮದ್ಯ ಖರೀದಿಸುವುದು ನಿಷೇಧ. ಆದರೆ ಕ್ರೈಸ್ತರು ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತರು ಸ್ಥಳೀಯಾಡಳಿತಗಳಿಂದ ವಿಶೇಷ ಅನುಮತಿ ಪಡೆದು ಮದ್ಯ ಖರೀದಿಸಬಹುದಾಗಿದೆ. ದೇಶದಲ್ಲಿ ಮದ್ಯ ಖರೀದಿಸಲು ಇರುವ ಕಠಿಣ ನಿಯಮಗಳಿಂದಾಗಿ ಹೆಚ್ಚಿನ ಮುಸ್ಲಿಮರು ಹಾಗೂ ಮುಸ್ಲಿಮೇತರರು ತಾವೇ ಮದ್ಯ ತಯಾರಿಸುತ್ತಾರೆ ಇಲ್ಲವೇ ಕಳ್ಳಭಟ್ಟಿ ಸೇವಿಸಿ ತಮ್ಮ ಪ್ರಾಣಕ್ಕೆ ತಾವೇ ಕಂಟಕ ತಂದುಕೊಳ್ಳುತ್ತಾರೆ.

ಅಕ್ಟೋಬರ್ ತಿಂಗಳಲ್ಲಿ ಈದ್ ಹಬ್ಬದ ದಿನದಂದೂ  ಕರಾಚಿಯಲ್ಲಿ ವಿಷಪೂರಿತ ಮದ್ಯ ಸೇವಿಸಿ 21 ಮಂದಿ ಮೃತಪಟ್ಟಿದ್ದರು. ಇದಕ್ಕೂ ಒಂದು ವಾರ ಮೊದಲು ಕರಾಚಿಯಲ್ಲಿ ನಡೆದ ಇಂತಹುದೇ ಇನ್ನೊಂದು ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದರು.