ಬೆಳಗಾವಿ ಚಲೋ ಚಳುವಳಿಯಲ್ಲಿ ದ ಕ ಜಿಲ್ಲೆಯ 300 ವೈದ್ಯರು ಭಾಗಿ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತೀಯ ವೈದ್ಯಕೀಯ ಸಂಘವು ಸೋಮವಾರ ನಡೆಸಿದ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 800 ವೈದ್ಯರು ಭಾಗವಹಿಸಿದ್ದರು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 300 ವೈದ್ಯರು ಪಾಲ್ಗೊಂಡಿದ್ದರು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರಾವಳಿ ವಿಭಾಗದ ಸಂಯೋಜಕ ಅಣ್ಣಯ್ಯ ಕುಲಾಲ್ ಹೇಳಿದ್ದಾರೆ.

ಮಸೂದೆ ಬಗ್ಗೆ ಮತ್ತೊಮ್ಮೆ ಭಾರತೀಯ ವೈದ್ಯಕೀಯ ಸಂಘದೊಂದಿಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಾವು ನಮ್ಮ ಪ್ರತಿಭಟನೆ ಮತ್ತು ಅಮರಣಾಂತ ಉಪವಾಸವನ್ನು ಮುಂದುವರಿಸುತ್ತೇವೆ. ನಾವು ಸರ್ಕಾರದ ಕಣ್ಣೀರು ತೊಳೆಯುವ ನಿರ್ಧಾರಗಳನ್ನು ಬಯಸಿದ್ದಲ್ಲ. ನಮ್ಮ 4 ಬೇಡಿಕೆಗಳ ಪೈಕಿ 3 ಬೇಡಿಕೆಗಳನ್ನಾದರೂ ಅವರು ಸ್ವೀಕರಿಸಬೇಕು. ನಾವು ಸ್ಥಳೀಯ ಅಹವಾಲು ಕೇಂದ್ರಗಳನ್ನು ಅಸ್ಥಿತ್ವಗೊಳಿಸಬೇಕು ಎಂಬ ಬೇಡಿಕೆಯನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದು ಡಾ ಅಣ್ಣಯ್ಯ ಕುಲಾಲ್ ಹೇಳಿದ್ದಾರೆ.

ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದ ವೈದ್ಯರು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ಮೆಂಟ್ಸ್ (ತಿದ್ದುಪಡಿ) ಮಸೂದೆ-2017 ವಿರೋಧಿಸಿ ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕ್ಲಿನಿಕ್ಕುಗಳು ಮುಚ್ಚಿದ್ದವು. ಎಲ್ಲಾ ಮೆಡಿಕಲ್ ಕಾಲೇಜುಗಳ ಮತ್ತು ಆಸ್ಪತ್ರೆಗಳ ತುರ್ತು ಇಲಾಖೆಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದುದರಿಂದ ಜನಸಾಮಾನ್ಯರಿಗೆ ದೊಡ್ಡ ಮಟ್ಟಿನ ಹೊಡೆತವೇನೂ ಬೀಳಲಿಲ್ಲ.

“ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಮಾನ್ಯವಾಗಿ ಪ್ರತಿದಿನ 800-900 ಹೊರರೋಗಿಗಳು ಬರುತ್ತಿದ್ದರು. ಆದರೆ ಮುಷ್ಕರದ ದಿನ ಅಂದಾಜು 1,400 ಹೊರರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ನಾವು ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದೆವು” ಎಂದು ಜಿಲ್ಲಾ ಸರ್ಜನ್ ಎಚ್ ಆರ್ ರಾಜೇಶ್ವರಿ ದೇವಿ ಹೇಳಿದ್ದಾರೆ.