ಪರಿಶಿಷ್ಟರ ಮೇಲಿನ ದೌರ್ಜನ್ಯ : ಬೆಂಗಳೂರಿನ `ವಿಶಿಷ್ಟ ಸಾಧನೆ’

ಬೆಂಗಳೂರು : 1989ರ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಸಂಖ್ಯೆಯಲ್ಲಿ ರಾಜ್ಯ ಮತ್ತು ಬೆಂಗಳೂರು ಮತ್ತೊಂದು ಬಾರಿ ಅಗ್ರಸ್ಥಾನ ಕಂಡಿದೆ.

ಮಹಾನಗರಗಳಲ್ಲಿ ದಾಖಲಾಗಿರುವ 1,741 ಪ್ರಕರಣಗಳ ಪೈಕಿ ಬೆಂಗಳೂರೊಂದರಲ್ಲೇ ಶೇ 30 ಎಸ್‍ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಮಹಾನಗರಗಳ ಸಾಲಿನಲ್ಲಿ ಬೆಂಗಳೂರಿನಲ್ಲಿ 199 ಪ್ರಕರಣಗಳು ದಾಖಲಾಗಿವೆ ಅಥವಾ ಇದರ ಪ್ರಮಾಣ ಶೇ 45 ಆಗಿದೆ ಎಂದು ರಾಷ್ಟ್ರೀಯ ಕ್ರೈಂ ದಾಖಲೆಗಳ ಬ್ಯೂರೋ ಅಂಕಿಅಂಶ ಹೇಳುತ್ತದೆ.

ಆದಾಗ್ಯೂ, ಸಮುದಾಯ ಮತ್ತು ಪೊಲೀಸರ ಮಧ್ಯೆ ಉತ್ತಮ ಸಮನ್ವಯ ಸಾಧಿಸಿರುವುದರಿಂದ ಅಥವಾ ಬಹುತೇಕ ಜಿಲ್ಲೆಗಳಲ್ಲಿ ಎಸ್‍ಸಿ/ಎಸ್ಟಿಗಳ ಕುಂದುಕೊರತೆ ಆಲಿಕೆ ಸಭೆಗಳಿಂದ, ಪರಿಶಿಷ್ಟ ವರ್ಗದವರು ಈ ಸೆಕ್ಷನಿನಡಿ ಪ್ರಕರಣ ದಾಖಲಿಸಲು ಮುಂದಾಗಿರುವುದರಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ಹೇಳುತ್ತಾರೆ.

ಆದರೆ ಶಿಕ್ಷೆ ಪ್ರಮಾಣದಲ್ಲಿ ಬ್ಯೂರೋ ಹೊಸತಾದ ಕತೆಯೊಂದನ್ನು ಮುಂದಿಟ್ಟಿದೆ. 2016ರಲ್ಲಿ ಬರೇ 28 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಇದರಲ್ಲಿ ಒಂದೂ ಕೇಸಿನಲ್ಲಿ ನಗರ ಪೊಲೀಸರು ಶಿಕ್ಷೆ ಪಡೆದಿಲ್ಲ. 335 ಪ್ರಕರಣಗಳು ಇನ್ನೂ ಕೊಳೆಯುತ್ತಿವೆ. ಇದೇ ರೀತಿ 2016ರಲ್ಲಿ ರಾಜ್ಯದಲ್ಲಿ ನಡೆದಿರುವ ಒಟ್ಟು 778 ಪ್ರಕರಣಗಳ ಪೈಕಿ ಶಿಕ್ಷೆಗೆ ಗುರಿಯಾದ ಪ್ರಮಾಣ ಕೇವಲ ಶೇ 2.8 ಆಗಿದೆ.

ಈ ಕಾಯ್ದೆಯಡಿ ದಾಖಲಾಗಿರುವ ಶೇ 20ರಷ್ಟು ಪ್ರಕರಣಗಳು ಸುಳ್ಳೆಂದು ಪೊಲೀಸರು ಪರಿಗಣಿಸಿದ್ದಾರೆ.