ಆಕ್ಷೇಪಾರ್ಹ ಪಠ್ಯಗಳ 3 ಪ್ರಕಾಶಕರ ಬಂಧಿಸಿದ ಕೊಚ್ಚಿ ಪೊಲೀಸರು

ಕೊಚ್ಚಿ : ರಾಜ್ಯದ ಚಕ್ಕರಪರಂಬು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಪೀಸ್ ಇಂಟರನ್ಯಾಶನಲ್ ಸ್ಕೂಲ್ ನಿಗದಿತ ಪಠ್ಯಪುಸ್ತಕಗಳಿಂದ ಪಾಠ ಮಾಡುವ ಬದಲು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಇಸ್ಲಾಂ ಬಗ್ಗೆ ಪಾಠಗಳನ್ನು ನಡೆಸುತ್ತಿವೆಯೆಂಬ ಆರೋಪದ ಮೇಲೆ ತನಿಖೆ ನಡೆಸುತ್ತಿದ್ದ ಪೊಲೀಸರು ಮತೀಯ ಸಾಮರಸ್ಯ ಕೆಡಿಸುವಂತಹ ಪಾಠಗಳನ್ನೊಳಗೊಂಡ ಪಠ್ಯಪುಸ್ತಕಗಳನ್ನು ಪ್ರಕಾಶಿಸುತ್ತಿದ್ದ ಮೂರು ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಬಂಧಿತರನ್ನು ದಾವೂದ್ ಮೊಹಮ್ಮದ್ ವೈದ್ (38), ಸಮೀದ್ ಅಹಮದ್ ಶೇಖ್ (31) ಹಾಗೂ ಸಾಹಿಲ್ ಹಮೀದ್ ಸಯ್ಯದ್ (28) ಎಂದು ಗುರುತಿಸಲಾಗಿದೆ. ಮೂವರೂ ಮುಂಬೈ ನಿವಾಸಿಗಳಾಗಿದ್ದಾರೆ.

ಪೀಸ್ ಇಂಟರನ್ಯಾಷನಲ್ ಸ್ಕೂಲಿನಲ್ಲಿ ಎರಡನೇ ತರಗತಿಯ ಮಕ್ಕಳಿಗಾಗಿರುವ ಪಠ್ಯ ಪುಸ್ತಕದಲ್ಲಿನ ಒಂದು ಪ್ರಶ್ನೆ “ನೀವು ಇಸ್ಲಾಂ ಧರ್ಮಕ್ಕಾಗಿ ನಿಮ್ಮ ಪ್ರಾಣ ನೀಡುತ್ತೀರಾ ?” ಎಂಬುದಾಗಿದೆ ಎಂದು ತಿಳಿದುಬಂದಿದೆ.

ಶಾಲೆಯ ವಿರುದ್ಧ ಈ ಹಿಂದೆ ಐಪಿಸಿ ಸೆಕ್ಷನ್ 153 (ವಿವಿಧ  ಗುಂಪುಗಳ ನಡುವೆ ಧರ್ಮ, ಜಾತಿ, ಜನ್ಮಸ್ಥಳ, ವಾಸಸ್ಥಳ ಹಾಗೂ ಭಾಷೆಯ ಆಧಾರದಲ್ಲಿ ವೈರತ್ವವನ್ನು ಸೃಷ್ಟಿಸುವುದು) ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆಕ್ಷೇಪಾರ್ಹ ವಿಷಯಗಳನ್ನೊಳಗೊಂಡಿದ್ದ ಹಲವಾರು ಪಠ್ಯ ಪುಸ್ತಕಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು.