ಪ್ರಧಾನಿ ಕಚೇರಿಯಿಂದ ಅಸ್ತು ನಿರೀಕ್ಷೆಯಲ್ಲಿ ಕರಾವಳಿಯ 3 ಹೊಸ ಟೋಲ್ ಬೂತ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೊಸದಾಗಿ ನಿರ್ಮಾಣಗೊಂಡಿರುವ ಮಂಗಳೂರು ತಾಲೂಕಿನ ತಲಪಾಡಿ, ಉಡುಪಿ ತಾಲೂಕಿನ ಹೆಜಮಾಡಿ ಮತ್ತು ಕುಂದಾಪುರ ತಾಲೂಕಿನ ಸಾಸ್ತಾನ ಟೋಲ್ ಬೂತುಗಳು ಕಾರ್ಯಾರಂಭಕ್ಕೆ ಸಿದ್ಧವಾಗಿದ್ದು, ಯೋಜನಾ ನಿರ್ವಹಣಾ ಕಚೇರಿಯ ಅನುಮತಿಗಾಗಿ ಕಾಯುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಟೋಲ್ ಬೂತುಗಳು ಕಾರ್ಯಾಚರಣೆಗೆ ಸಿದ್ಧವಾಗಿದ್ದರೂ ತಲಪಾಡಿ ಮತ್ತು ಸಾಸ್ತಾನ ನಡುವೆ ಅನೇಕ ಸ್ಥಳಗಳಲ್ಲಿ ಅಸುರಕ್ಷಿತ ರಸ್ತೆ ಸಂಪರ್ಕಗಳಿವೆ. ಕೆಲವು ಕಡೆ ರಸ್ತೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ತೊಕ್ಕೊಟ್ಟು ಜಂಕ್ಷನಿನಲ್ಲಿ 1 ಕಿ ಮೀ ಫ್ಲೈ ಓವರ್, ಭಗವಾನ್ ಮಹಾವೀರ ವೃತ್ತ 1.25 ಕಿ ಮೀ, ಪಡುಬಿದ್ರಿ ಪಟ್ಟಣದಲ್ಲಿ 2 ಕಿ ಮೀ ಲೇನ್ ರಸ್ತೆ. ಉಡುಪಿ ಕರಾವಳಿ ವೃತ್ತ 1 ಕಿ ಮೀ ಫ್ಲೈ ಓವರ್, ಕುಂದಾಪುರ ಪಟ್ಟಣದಲ್ಲಿ 2 ಕಿ ಮೀ ಚತುಷ್ಪಥ ರಸ್ತೆ ಮತ್ತು ಫ್ಲೈ ಓವರ್, ಸುರತ್ಕಲ್, ಹೆಜಮಾಡಿ ಉಡುಪಿ ಸಾಸ್ತಾನ ವಲಯಗಳು ಸೇರಿದಂತೆ ಎಲ್ಲಾ ಮೂರು ವಲಯಗಳಲ್ಲಿ ಸುಮಾರು 35 ಕಿ ಮೀ ಉದ್ದದ ಸರ್ವಿಸ್ ರಸ್ತೆಗಳು ಇನ್ನೂ ಪೂರ್ಣಗೊಂಡಿಲ್ಲ.

ಇದೇ ವೇಳೆ ಹಲವು ರೈತರು ನಿಧಾನಗತಿಯಲ್ಲಿ ಚಲಿಸುವ ಎತ್ತಿನಗಾಡಿ, ಟ್ರಾಕ್ಟರ್ ಹಾಗೂ ಪ್ರಾಣಿಗಳಿಂದ ಚಲಿಸುವ ಗಾಡಿಗಳಿಗಾಗಿ ಅಂಡರ್ ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.

ಈ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.