ಪ್ರಪಾತಕ್ಕೆ ಉರುಳಿದ ಬೊಲೆರೋ : ಕೊಪ್ಪಳದ ಮೂವರಿಗೆ ಗಾಯ

ಕರಾವಳಿ ಅಲೆ  ವರದಿ

ಬೆಳ್ತಂಗಡಿ : ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಸೋಮವಾರ ಬೆಳಗಿನ ಜಾವ ಬೊಲೆರೋವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 60 ಅಡಿ ಪ್ರಪಾತಕ್ಕೆ ಉರುಳಿ ಬಿದ್ದು ಕೊಪ್ಪಳ ಜಿಲ್ಲೆಯ 3 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾಟ್ಗಿ ನಿವಾಸಿಗಳಾಗಿರುವ ಚಾಲಕ ಶ್ರೀಧರ್, ಶರಣಪ್ಪ ಹಾಗೂ ತೇಜಸ್ವಿನಿ ಎನ್ನುವವರಿಗೆ ಗಾಯವಾಗಿದ್ದು, ಇತರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಬೊಲೆರೋ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳುತ್ತಿದ್ದಂತೆಯೇ ಹಿಂದಿನಿಂದ ಬರುತ್ತಿದ್ದ ವಾಹನದಲ್ಲಿದ್ದ ಮುಂಡಾಜೆ ಗ್ರಾಮ ಪಂಚಾಯತ ಸದಸ್ಯ ಅಬ್ದುಲ್ ಅಝೀಜ್ ಹಾಗೂ ಹಕ್ಕೀಮ್ ಕಾಜೂರು, ಬಶೀರ, ಹಮೀದ್ ಉಜಿರೆ, ಉಮ್ಮರ್ ಮುಂಡಾಜೆ ಇತರರು ಕೂಡಲೇ ಅಪಾಯಕ್ಕೆ ಸಿಲುಕಿದ್ದವರ ರಕ್ಷಣೆಗೆ ಧಾವಿಸಿದ್ದು, ಸುಮಾರು 60 ಅಡಿ ಪ್ರಪಾತದಲ್ಲಿ ಸಿಲುಕಿದ್ದವರನ್ನು ಹಗ್ಗದ ಸಹಾಯದಿಂದ ಮೇಲಕ್ಕೆತ್ತ್ತಿ ಅಪಾಯದಿಂದ ರಕ್ಷಿಸಿದ್ದಾರೆ.

 

LEAVE A REPLY