ರಸ್ತೆಗಿಳಿದ 3 ಹೈವೇ ಗಸ್ತು ವಾಹನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೆದ್ದಾರಿಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೆದ್ದಾರಿಯ ಅಪಘಾತ ಪ್ರದೇಶವಾಗಿ ಗುರುತಿಸಿಕೊಂಡಿರುವ ಶಿರಾಡಿ, ಚಾರ್ಮಾಡಿ ಮತ್ತು ಸಂಪಾಜೆ ಭಾಗಗಳಿಗೆ ಮೂರು ಪೆಟ್ರೋಲಿಂಗ್ ವಾಹನವನ್ನು ದಕ್ಷಿಣ ಕನ್ನಡ ಪೊಲೀಸರು ಒದಗಿಸಿದ್ದಾರೆ. ಶುಕ್ರವಾರದಿಂದ ಈ ಪ್ಯಾಟ್ರೋಲಿಂಗ್ ವಾಹನಗಳು ಕಾರ್ಯಾರಂಭಿಸಿವೆ.

ರಾಜ್ಯ ಸರಕಾರವು ಇತ್ತೀಚೆಗಷ್ಟೇ 100 ಗಸ್ತು ವಾಹನಗಳನ್ನು ಖರೀದಿಸಿತ್ತು. ಈ ನೂತನ ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗಾಯಾಳುವನ್ನು ಉಪಚರಿಸಲು ಇರುವ ಸ್ಟ್ರೇಚರ್, ಸೀಸಿಟೀವಿ ಕ್ಯಾಮರಾ, ಟಾಪ್ ಸರ್ಚ್ ಲೈಟ್ ಜೊತೆಗೆ ವೈರ್ಲೆಸ್ ಸಂಪರ್ಕದೊಂದಿಗೆ ಜಿ ಪಿ ಆರ್ ಎಸ್ ಸೌಲಭ್ಯವೂ ಇದೆ. ಸರಕಾರ ಈ ವಾಹನಗಳನ್ನು ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ಬೇರೆ ಬೇರೆ ಪೊಲೀಸ್ ಇಲಾಖೆಗಳಿಗೆ ನೀಡಿತ್ತು.

ಇವುಗಳಲ್ಲಿ ಮೂರು ವಾಹನಗಳನ್ನು ಹೆದ್ದಾರಿಯ ಗಸ್ತು ನಿರ್ವಹಣೆಗೆ ಬಳಸಿಕೊಂಡಿದ್ದೇವೆ ಎಂದಿರುವ ಪೊಲೀಸ್ ವರಿಷ್ಠಾಧಿಕಾರಿ ಗುಲಾಬ್ ರಾವ್ ಬೊರಸೆ, “ಟ್ರಾಫಿಕ್ ಸಂಚಾರ ಸುಗಮಗೊಳಿಸುವುದು, ಗಾಯಾಳುಗಳಿಗೆ ನೆರವಾಗುವುದು” ಇದರ ಪ್ರಮುಖ ಉದ್ದೇಶ ಎಂದು ಹೇಳಿದ್ದಾರೆ.

“ಜೊತೆಗೆ ಬಂದೋಬಸ್ತ್ ಕಾರ್ಯಕ್ಕೂ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. ಬಂಟ್ವಾಳ ನಗರ, ಉಪ್ಪಿನಂಗಡಿ, ಸುಳ್ಯ ಪೊಲೀಸ್ ಠಾಣೆಗಳಿಗೂ ಈ ವಾಹನಗಳನ್ನು ನೀಡಲಾಗಿದೆ” ಎಂದವರು ಹೇಳಿದ್ದಾರೆ.