ಹುಣಸೂರಿನ ರಸ್ತೆ ದುರಂತದಲ್ಲಿ ಉಳ್ಳಾಲದ ಮೂವರ ದುರ್ಮರಣ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರ ಹೊರವಲಯದ ತೊಕ್ಕೊಟ್ಟುವಿನಿಂದ ಮೈಸೂರಿಗೆ ತೆರಳಿದ್ದ ಉಳ್ಳಾಲ ಮೂಲದ ಕುಟುಂಬದ ಸದಸ್ಯರು ಹುಣಸೂರು ತಾಲೂಕಿನ ಬಿಳಿಕೆರೆ ಎಂಬಲ್ಲಿ ನಡೆದ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಪ್ರವಾಸ ನಿಮಿತ್ತ ತೆರಳಿದ್ದ ಕುಟುಂಬ ಕೆಲವೇ ಗಂಟೆಗಳೊಳಗೆ ಮೈಸೂರು ತಲುಪುವರಿದ್ದರು. ಆದರೆ ನಡೆದ ರಸ್ತೆ ದುರಂತದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ವಿಧಿಯಾಟಕ್ಕೆ ಬಲಿಯಾದರು.

ಟೆಂಪೋ ಟ್ರಾವೆಲರ್ ಹುಣಸೂರು ತಾಲೂಕಿನ ಬಿಳಿಕೆರೆ ಸಮೀಪ ವಾಹನವೊಂದನ್ನು ಓವರಟೇಕ್ ಮಾಡುವ ಸಂದರ್ಭದಲ್ಲಿದ್ದಾಗ ಮುಂಭಾಗದಿಂದ ತೆರಳುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತೊಕ್ಕೊಟ್ಟುವಿನ ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಬಾಡಿಗೆಗಿದ್ದ ಹಮೀದ್ (52), ಅವರ ಪುತ್ರ ಹಾತೀಫ್(11) ಹಾಗೂ ಸಹೋದರ ಇಕ್ಬಾಲ್ (45) ಮೃತಪಟ್ಟವರು.

ಪುತ್ರನ ಜತೆಗೆ ಕುಳಿತುಕೊಂಡಿದ್ದ ಹಮೀದ್ ಮತ್ತು ಅವರ ಜೊತೆ ಕುಳಿತುಕೊಂಡಿದ್ದ ಸಹೋದರ ಇಕ್ಬಾಲ್ ಮೂವರು ತಲೆಗೆ ಗಂಭಿರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಹಿಲ್, ಅನ್ವೀಝ್, ಖತೀಜಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಉಳಿದ 12 ಮಂದಿ ಗಂಭೀರ ಗಾಯಗೊಂಡು ಕೆಲವರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.

ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ಉದ್ಯಮಿಯಾಗಿರುವ ಹಮೀದ್ (52) ಅವರ ಪತ್ನಿ ಆತಿಕಾ (40) ಮಕ್ಕಳಾದ ಅನ್ವೀಝ್ (19) ಮತ್ತು ಹಾತೀಫ್ (11), ಹಮೀದ್ ಸಹೋದರ ಇಕ್ಬಾಲ್ (45), ಪತ್ನಿ ರಲಿಯಾ (38) ಮಕ್ಕಳಾದ ರಾಹಿಲ್ (18) ಮತ್ತು ಇಷಾ, ಇನ್ನೊಬ್ಬ ಸಹೋದರ ಸಂಶುದ್ದೀನ್ ಎಂಬವರ ಪತ್ನಿ ಮುಮ್ತಾಝ್ (29) ಮಕ್ಕಳಾದ ಆಸೀಫ್ (10), ಶಬೀರ್ (11), ಹಮೀದ್ ಅವರ ಸಹೋದರಿಯರಾದ ಸಿದ್ಧಕಟ್ಟೆ ನಿವಾಸಿ ನಝೀಮಾ ಯಾನೆ ಖತೀಜಮ್ಮ (45), ಸಮೀರಾ ಬಾನು (44) ಮತ್ತು ಫಮೀದಾ ಭಾನು (35) ಇವರ ಪತಿ ಸೈಯದ್ ಬಾಬಾ (42) ಹಾಗೂ ಮಕ್ಕಳಾದ ಶಿಬ್ಲಾ, ಶಮೀಝ್, ಶಹೀಮ್, ಚಾಲಕ ದೀಪಕ್ ಸೇರಿದಂತೆ 19 ಮಂದಿ ಮೈಸೂರು ಮತ್ತು ಊಟಿಗೆ ಪ್ರವಾಸ ಹೊರಟಿದ್ದರು. ಸೆಪ್ಟೆಂಬರ್ 13ರಂದು ರಾತ್ರಿ 11.30 ಇಲ್ಲಿಂದ ಹೊರಟು ಹೋಗಿದ್ದ ಅವರು ಮರುದಿನ ಮುಂಜಾನೆ ಮೈಸೂರಿಗೆ ತಲುಪುವವರಿದ್ದರು.

ಹಮೀದ್ ಸಹೋದರ ಇಕ್ಬಾಲ್ 27 ವರ್ಷಗಳಿಂದ ವಿದೇಶದಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದಾರೆ. ಊರಿಗೆ ಬಂದಿದ್ದವರು ಕುಟುಂಬ ಸಮೇತರಾಗಿ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸಿ ಸೋಮವಾರ ಪ್ರವಾಸ ಹೊರಟಿದ್ದರು. ಡಿಸೆಂಬರ್ 27ರಂದು ಇವರು ಮತ್ತೆ ವಿದೇಶಕ್ಕೆ ತೆರಳುವವರಿದ್ದರು. ತೀರಾ ಹಿಂದುಳಿದ ಕುಟುಂಬದಲ್ಲಿ ಬೆಳೆದಿದ್ದ ಮೃತ ಹಮೀದ್ ಕಲಾವಿದರಾಗಿದ್ದವರು. ಉಳ್ಳಾಲದ ಮಾಸ್ತಿಕಟ್ಟೆ ಬಳಿ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ಹೊಂದಿದ್ದರು.