ಕಟ್ಟಡ ಪರವಾನಿಗೆ ನೀಡಲು ವಿಳಂಬಿಸಿದ ಮೂವರು ದ ಕ ಅಧಿಕಾರಿಗಳಿಗೆ ಹೈ ದಂಡ

ಸಾಂದರ್ಭಿಕ ಚಿತ್ರ

ಬೆಂಗಳೂರು : ಕಟ್ಟಡವೊಂದಕ್ಕೆ ಪರವಾನಗಿ ನೀಡಲು ವಿಳಂಬಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಂದಾಯ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆಯಲ್ಲದೆ ನ್ಯಾಯಾಲಯದಲ್ಲಿ ತಲಾ ರೂ 50,000 ಠೇವಣಿಯಿಡುವಂತೆಯೂ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಮುಂದಿನ ವಿಚಾರಣಾ ದಿನಾಂಕವಾದ ನವೆಂಬರ್ 15ರಂದು ಹಾಜರುಪಡಿಸುವಂತೆಯೂ ಅವರಿಗೆ ಸೂಚಿಸಲಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ ಎನ್ ನವೀನ್ ಕುಮಾರ್, ಸಹಾಯಕ ಆಯುಕ್ತ  ರೇಣುಕಾ ಪ್ರಸಾದ್ ಹಾಗೂ ತಹಸೀಲ್ದಾರ್ ಟಿ ಜಿ ಗುರು ಅವರೇ ಹೈಕೋರ್ಟಿನಿಂದ ತರಾಟೆಗೊಳಗಾದವರು.

ದೇರಳಕಟ್ಟೆಯ ಹೇಮಂತ್ ಶೆಟ್ಟಿ ಎಂಬವರು ಅಪೀಲುದಾರರಾಗಿದ್ದಾರೆ. ಮಾರ್ಚ್ 30, 2016ರಂದು ಪಿಡಿಒ ತಮ್ಮನ್ನು ಸಂಪರ್ಕಿಸಿ ತನ್ನ ತಂದೆಗೆ ಕಂದಾಯ ಇಲಾಖೆ ಕೊಡ ಮಾಡಿದ ಜಾಗದ ಹಕ್ಕುಪತ್ರದ ಕಾನೂನುಬದ್ಧತೆ ವಿಚಾರದಲ್ಲಿ ವಿವಾದವಿರುವುದರಿಂದ ಕಟ್ಟಡ ಪರವಾನಿಗೆ ನೀಡಲಾಗುವುದಿಲ್ಲವೆಂದು ಹೇಳಿದ್ದರು. ನಂತರ ಪರವಾನಗಿ ನೀಡುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹೇಳಿದ್ದರೂ ಪಿಡಿಒ ಅದನ್ನು ಪಾಲಿಸಿಲ್ಲ ಎಂದು ಶೆಟ್ಟಿ ದೂರಿದ್ದರು. ಇದೀಗ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಠೇವಣಿಯಿಡಲು ಹೇಳಲಾದ ಮೊತ್ತವನ್ನು ಅಪೀಲುದಾರನಿಗೆ ಏಕೆ ನೀಡಬೇಕೆಂಬ ಬಗ್ಗೆ ವಿವರಣೆ ನೀಡುವಂತೆಯೂ ನ್ಯಾಯಾಲಯ ಹೇಳಿದೆ.