3 ಯುವಕರು ಸ್ಪಾಟ್ ಡೆತ್ ಬಸ್-ಓಮ್ನಿ ನಡುವೆ ಭೀಕರ ಅಪಘಾತ

ನಮ್ಮ ಪ್ರತಿನಿಧಿ ವರದಿ

ಜೋಯಿಡಾ : ತಾಲೂಕಿನ ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯ ಅಕ್ರಾಳಿ ಗ್ರಾಮದ ಬಳಿ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಓಮ್ನಿ ಹಾಗೂ ಗೋವಾ ರಾಜ್ಯದ ಕದಂಬಾ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತಕ್ಕೆ ಓಮ್ನಿಯಲ್ಲಿದ್ದ 5 ಯುವಕರಲ್ಲಿ 3 ಯುವಕರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ.

ಶಾನೂರ ತುಕಾರಾಮ ಮುಲ್ಲ , ಪ್ರಕಾಶ ಶಶಿಕಾಂತ ದೇಸಾಯಿ, ಕೇಶವ ಮೃತಪಟ್ಟವರು. ಕರಿಯಪ್ಪಾ ಹಾಗೂ ಶೆಟ್ಯಾ ವಡ್ಡರ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿ ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಇವರೆಲ್ಲರೂ ತಾಲೂಕಿನ ರಾಮನಗರದ ನಿವಾಸಿಗಳಾಗಿದ್ದು, ರಾಮನಗರದಿಂದ ಗೋವಾಕ್ಕೆ ತೆರಳುತಿದ್ದಾಗ ಈ ಅಪಘಾತ ಸಂಭವಿಸಿದೆ. ಖಾನಾಪುರ ತಾಲೂಕು ಗಡಿ ಭಾಗವಾಗಿದ್ದರಿಂದ ಖಾನಾಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ತೂಫಾನ್ ಪಲ್ಟಿ : 7 ಮಂದಿ ಗಾಯ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ತೂಫಾನ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಸೋಣಂದೂರು ಗ್ರಾಮದ ಪಣಕಜೆ ಬಳಿ ಗುರುವಾರ ಸಂಜೆ ಉರುಳಿದ ಪರಿಣಾಮ 7 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಕಾರ್ಯಕ್ರಮವೊಂದನ್ನು ಮುಗಿಸಿ ಬರುತ್ತಿದ್ದಾಗ ಘಟನೆ ಸಂಭವಿಸಿದ ಅವಘಡದಲ್ಲಿ ತೂಫಾನಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.