ಕಂಬದಲ್ಲಿ ಕೆಲಸ ಮಾಡುವಾಗಲೇ ಸ್ವಿಚ್ ಆನ್ ಮಾಡಿದ ಹೆಸ್ಕಾಂ ಸಿಬ್ಬಂದಿ

ಮೂವರು ಗಂಭೀರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಬನವಾಸಿ ವಲಯದಲ್ಲಿ ವಿದ್ಯುತ್ ಲೈನ್ ದುರಸ್ತಿ ಮುಗಿಯುವದರೊಳಗೆ ಸಿಬ್ಬಂದಿ ಸ್ವಿಚ್ ಆನ್ ಮಾಡಿದ ಪರಿಣಾಮವಾಗಿ ಕಂಬದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಶಾಕ್ ಹೊಡೆದು ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.

ಬನವಾಸಿ ವಲಯದ ಮೂರು ಕಡೆ ಬುಧವಾರ ವಿದ್ಯುತ್ ಜೆಓಸಿ ರಿಪೇರಿ ಸಂಬಂಧ ಪವರ್ ಕಡಿತ ಮಾಡಲಾಗಿತ್ತು. ಮೂರು ಲೈನ್ಮನ್ನುಗಳು ಎಲ್ ಸಿ ತೆಗೆದುಕೊಂಡು ಹೋಗಿದ್ದರು. ಸಂಜೆ ಹೊತ್ತಿಗೆ ಇಬ್ಬರು ಲೈನ್ಮನ್ನುಗಳು ಎಲ್ ಸಿ ವಾಪಸ್ ಕೊಟ್ಟರು. ಕೋಟೆಕೊಪ್ಪದಲ್ಲಿ ಮೂರನೇ ಲೈನ್ಮನ್ ನೇತೃತ್ವದಲ್ಲಿ ಕೆಲಸ ನಡೆಯುತ್ತಿತ್ತು.

ಹೆಸ್ಕಾಂ ಅಧಿಕಾರಿಗಳು ತಕ್ಷಣ ಲೈನ್ ಆನ್ ಮಾಡಿದ್ದು, ಆ ಹೊತ್ತಿಗೆ ಕೋಟೆಕೊಪ್ಪದಲ್ಲಿ ಹೆಸ್ಕಾಂ ಗುತ್ತಿಗೆದಾರರ ಕೆಲಸಗಾರರು ಕಂಬದಲ್ಲಿ ವಿದ್ಯುತ್ ಶಾಕ್ ತಗುಲಿ ಸುರೇಂದ್ರ ಕಿರವತ್ತಿಯು ಕಂಬದ ಲೈನಿಗೆ ಸಿಕ್ಕಿ ಬಿದ್ದಿದ್ದರು. ಪರಶುರಾಮ ಕುಪ್ಪಗಡ್ಡೆ ಹಾಗೂ ಮಂಜುನಾಥ ಚನ್ನಯ್ಯ ಕೆಳಗೆ ಬಿದ್ದು ಬೆನ್ನು, ಸೊಂಟಕ್ಕೆ ಗಂಭೀರ ಪೆಟ್ಟಾಗಿದೆ.

ತಕ್ಷಣ ಹೆಸ್ಕಾಂ ಅಧಿಕಾರಿಗಳು ಲೈನ್ ಆಫ್ ಮಾಡಿದರು. ಅಷ್ಟರೊಳಗೆ ಲೈನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುರೇಂದ್ರದ ಕಾಲಿನ ಎರಡು ತೊಡೆ ಸುಟ್ಟುಹೋಗಿದೆ. ಮೂವರು ಗಾಯಾಳುಗಳನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲಾಗಿದೆ. ಸುದ್ದಿ ತಿಳಿದು ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸೇರಿದರು. ಸಿಪಿಐ ಕೃಷ್ಣಾನಂದ ಆಸ್ಪತ್ರೆಗೆ ಭೇಟಿ ನೀಡಿದಾಗ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕೆಲಸಗಾರರು ಅಸಮಾಧಾನ ಹೊರಹಾಕಿದ್ದಾರೆ.