ನಕಲಿ ಚಿನ್ನ ಅಡವಿಟ್ಟು 16.70 ಲಕ್ಷ ರೂ ವಂಚನೆ

ಸಾಂದರ್ಭಿಕ ಚಿತ್ರ

ಮೂವರ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಎಂಬಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಚಿನ್ನಾಭರಣ ಅಡವು ಸಾಲಕ್ಕೆ ಬರುವ ಚಿನ್ನಾಭರಣ ಮೌಲ್ಯ ಮತ್ತು ಗುಣಮಟ್ಟ ನಿರ್ಧರಿಸುವ ಕೆಲಸ ಮಾಡುತ್ತಿದ್ದ ಸರಾಪ, ಆತನ ಮಗಳು ಹಾಗೂ ಆತನ ಇನ್ನೊಬ್ಬ ಸ್ನೇಹಿತ ಸಹಿತ ಮೂವರು ಸೊಸೈಟಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸುಮಾರು 16.70 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖೆಯಲ್ಲಿ ಸರಾಪನಾಗಿ ಕೆಲಸ ಮಾಡುತ್ತಿದ್ದ, ಬ್ರಹ್ಮಾವರದಲ್ಲಿ ವೈಷ್ಣವಿ ಜುವೆಲರ್ಸ್ ಹೊಂದಿರುವ, ಬ್ರಹ್ಮಾವರ ಸಮೀಪದ ಚಾಂತಾರು ಗ್ರಾಮ ದೇವುಬೈಲು ಸಿಂಧೂರ ಮನೆ ನಿವಾಸಿ ರಮೇಶ ಆಚಾರ್ಯ (50) ಆತನ ಮಗಳು ಸರಿತಾ ಆಚಾರ್ಯ (33) ಹಾಗೂ ಬಾರ್ಕೂರು ಸಮೀಪದ ಹೇರಾಡಿ ಗ್ರಾಮ ಅನುಗ್ರಹ ಮನೆ ನಿವಾಸಿ ಶ್ರೀಪತಿ ಆಚಾರ್ಯ (40) ವಂಚನೆ ನಡೆಸಿದ ಆರೋಪಿಗಳು.

ರಮೇಶ ಆಚಾರ್ಯನು ಸೊಸೈಟಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 11.53 ಲಕ್ಷ ಹಾಗೂ ಮಗಳು ಸರಿತಾ ಆಚಾರ್ಯ ಹಾಗೂ 4.23 ಲಕ್ಷ ಮತ್ತು ಸ್ನೇಹಿತ ಶ್ರೀಪತಿ ಆಚಾರ್ಯ 93 ಸಾವಿರ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ಕರಾವಳಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಬ್ರಹ್ಮಾವರ ಶಾಖಾ ಮ್ಯಾನೇಜರ್ ಸಂತೆಕಟ್ಟೆ ನಾರಾಯಣ ನಗರ ಲೇಜೌಟ್ ಪ್ರೊವಿಡೆನ್ಸ್ ಮನೆ ನಿವಾಸಿ ಜೋವಿಟಾ ಶಾಂತಿ ಡಿಸೋಜಾ ನೀಡಿದ ಖಾಸಗಿ ದೂರಿನಂತೆ ಆರೋಪಿಗಳ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.