ಮೂವರಿಗೆ ಬಿಯರ್ ಬಾಟ್ಲಿಯಿಂದ ಹಲ್ಲೆ

ವಿಟ್ಲ : ಪೂರ್ವಧ್ವೇಷದ ಹಿನ್ನೆಲೆಯಲ್ಲಿ ಮೂವರ ತಂಡವೊಂದು ಮೂವರು ಯುವಕರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ಸೋಮವಾರ ರಾತ್ರಿ ವಿಟ್ಲ-ಕಲ್ಲಡ್ಕ ರಸ್ತೆಯ ಬೊಬ್ಬೆಕೇರಿ ಎಂಬಲ್ಲಿನ ಬಾರಲ್ಲಿ ವಿಟ್ಲ ಕಸಬಾ ಗ್ರಾಮದ ದೇವಸ್ಥಾನ ರಸ್ತೆ ನಿವಾಸಿ ವಿಜಿತ್(25), ನೆತ್ರಕೆರೆ ನಿವಾಸಿ ಪ್ರಶಾಂತ್ (25) ಮತ್ತು ಕರಿಂಕ ನಿವಾಸಿ ಸುಖೇಶ್ (25) ಎಂಬವರು ಊಟ ಮಾಡುತ್ತಿದ್ದರೆನ್ನಲಾಗಿದೆ. ಇದೇ ಸಂದರ್ಭ ವೀರಕಂಬ ಗ್ರಾಮದ ಮಂಗಲಪದವು ನಿವಾಸಿ ಶಿವಾನಂದ (26), ಕೇಪು ನಿವಾಸಿ ಗಣೇಶ (31)ಯಾನೆ ಕೇಪು ಗಣೇಶ ಮತ್ತು ಅಡ್ಯನಡ್ಕ ನಿವಾಸಿ ಗಿರೀಶ (32) ಎಂಬವರು ಅಲ್ಲಿಗೆ ಬಂದಿದ್ದರೆನ್ನಲಾಗಿದೆ. ಈ ಹಿಂದೆ ನಡೆದಿದ್ದ ಘರ್ಷಣೆಗೆ ಸಂಬಂಧಿಸಿ ಎರಡು ತಂಡಗಳೊಳಗೆ ಪರಸ್ಪರ ವೈಮನಸ್ಸು ಹುಟ್ಟಿಕೊಂಡಿತ್ತೆನ್ನಲಾಗಿದೆ. ಅದೇ ಮತ್ತಷ್ಟು ಮುಂದುವರಿದು ಎರಡು ಗುಂಪುಗಳೊಳಗೆ ಬಾರಲ್ಲಿ ಮಾತಿನ ಚಕಮಕಿ ನಡೆದಿದ್ದು ಶಿವಾನಂದ, ಗಣೇಶ್ ಮತ್ತು ಗಿರೀಶ್ ಇನ್ನೊಂದು ಗುಂಪಿನ ಮೇಲೆ ಬಿಯರ್ ಬಾಟಲಿಯಿಂದ ತಿವಿದು ಗಂಭೀರ ಹಲ್ಲೆ ನಡೆಸಿದ್ದಾರೆ. ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು ನೀಡಿರುವ ದೂರಿಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ವಿಟ್ಲ ಠಾಣೆಯಲ್ಲಿ ಗುಂಪು ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಮೂವರು ಆರೋಪಿಗಳ ಪೈಕಿ ಶಿವಾನಂದ ವಿರುದ್ಧ ಈ ಹಿಂದೆಯೇ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟ್ ದಾಖಲಾಗಿದ್ದರೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಕೇಪು ಗಣೇಶ್ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಪಟ್ಟ ಕಟ್ಟಿಕೊಂಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಆರೋಪಿಗಳ ಪೈಕಿ ಗಣೇಶ್ ಮತ್ತು ಗಿರೀಶನನ್ನು ಬಂಧಿಸಿದ್ದು, ತಲೆಮರೆಸಿಕೊಂಡ ಆರೋಪಿ ಶಿವಾನಂದನ ಪತ್ತೆಗಾಗಿ ಬಲೆಬೀಸಿದ್ದಾರೆ.