ಮಧು ಬಂ ವಿರುದ್ಧ ಪೂಜಾರಿ ಆಕ್ರೋಶ

ಆತ್ಮಕಥನದ ಎರಡನೇ ಆವೃತ್ತಿ ಬಿಡುಗಡೆ

ಕರಾವಳಿ ಅಲೆ  ವರದಿ

ಮಂಗಳೂರು : ಜನಾರ್ದನ ಪೂಜಾರಿ `ಸಾಲಮೇಳದ ಸಂಗ್ರಾಮ’ ಆತ್ಮಕಥನದ ಎರಡನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಶಾಸಕ ಮಧು ಬಂಗಾರಪ್ಪ ವಿರುದ್ಧ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಶಿವರಾತ್ರಿ ದಿನವಾದ ಮಂಗಳವಾರ ಕುದ್ರೋಳಿ ಗೋಕರ್ಣನಾಧ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪುಸ್ತಕದ ಎರಡನೇ ಆವೃತ್ತಿ ಐದು ಸಾವಿರ ಪ್ರತಿಗಳ ಬಿಡುಗಡೆ ಮಾಡಲಾಯಿತು.

ಪುಸ್ತಕ ಬಿಡುಗಡೆಗೂ ಮುನ್ನ ಮಾತನಾಡಿದ ಜನಾರ್ದನ ಪೂಜಾರಿ, “ಇತ್ತೀಚೆಗೆ ಮಂಗಳೂರಿಗೆ ಬಂದವರೊಬ್ಬರು ನನ್ನನ್ನು ಹುಚ್ಚ ಎಂದು ಕರೆದಿದ್ದಾರೆ, ತನ್ನ ಆತ್ಮಕಥೆಯಲ್ಲಿ ಸುಳ್ಳುಗಳ ಕಂತೆಯನ್ನು ಬರೆಯಲಾಗಿದೆ ಎಂದು ಹೇಳಿದ್ದಾರೆ. ಪೂಜಾರಿ ತನ್ನ ಆತ್ಮಕಥನದಲ್ಲಿ ಬರೆದಿರುವುದೆಲ್ಲ ಸತ್ಯ ಹೊರತು ಸುಳ್ಳಲ್ಲ” ಎಂದು ಹೇಳಿದರು.

“ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸತ್ಯವನ್ನೇ ಹೇಳಿದ್ದೇನೆ. ನಾವು ಬಿಲ್ಲವರು, ಸತ್ಯ ಹೇಳಲು ಭಯಪಡಲ್ಲ. ಬಂಗಾರಪ್ಪ ಅವರ ಕುರಿತು ಬರೆದಿರುವುದೆಲ್ಲ ಸತ್ಯ” ಎಂದು ಪೂಜಾರಿ ಹೇಳಿದರು.

“ನನ್ನ ಆತ್ಮಕಥೆಯಲ್ಲಿ ಉಲ್ಲೇಖಿಸಿರುವ ಎಲ್ಲಾ ಅಂಶಗಳೂ ಸತ್ಯದಿಂದ ಕೂಡಿದ್ದು ಎನ್ನುವುದನ್ನು ಕ್ಷೇತ್ರದ ಸನ್ನಿಧಿಯಲ್ಲಿ ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ಕೃತಿ ಮೂಲಕ ನನಗೆ ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ಖಂಡಿತಾ ಇಲ್ಲ. ನಾವು ಯಾರಿಗೂ ನೋವನ್ನುಂಟು ಮಾಡುವುದೂ ಇಲ್ಲ. ನನ್ನ ತಾಯಿಗೆ ಬೈದವರಿಗೂ ನಾನು ಒಳ್ಳೆಯದಾಗಲಿ ಎಂದು ದೇವರ ಸನ್ನಿಧಿಯಲ್ಲಿ ಕೈಮುಗಿದಿದ್ದೇನೆ” ಎಂದು ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ಮತ್ತೆ ತನ್ನ ನೋವನ್ನು ಹಂಚಿಕೊಂಡ ಜನಾರ್ದನ ಪೂಜಾರಿ, ಸಚಿವ ರಮಾನಾಥ ರೈ ಹೆಸರು ಎತ್ತದೆ ತಾನು ಅವರನ್ನು ಕ್ಷಮಿಸಿದ್ದೇನೆ ಎಂದು ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮದ ನಿರ್ದೇಶಕಿ, ಮಾಜಿ ಸಚಿವೆ ಕೊಡಗಿನ ಸುಮಾ ವಸಂತ್ ಅವರ ಬಗ್ಗೆ ಪೂಜಾರಿ ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಪ್ರತಿ ವರ್ಷ ಶಿವರಾತ್ರಿ ಜಾಗರಣೆಗೆ ಸುಮಾ ವಸಂತ್ ಕುದ್ರೋಳಿಗೆ ಬರುತ್ತಿದ್ದರು. ಆದರೆ ಈ ಬಾರಿ ಸುಮಾ ವಸಂತ್ ಕುದ್ರೋಳಿಯನ್ನು ಮರೆತಿದ್ದಾರೆ ಎಂದರು. “ಕುದ್ರೋಳಿಗೆ ಬಂದಿದ್ದರಿಂದ ಸುಮಾ ವಸಂತ್ ದೊಡ್ಡ ಹುದ್ದೆಗೇರುವಂತಾಗಿತ್ತು. ಪರಮಾತ್ಮನ ಕ್ಷೇತ್ರದಲ್ಲಿ ಹೇಳುತ್ತಿದ್ದೆನೆ, ಸುಮಾ ಪ್ರಮಾದ ಮಾಡಿದ್ದಾರೆ” ಎಂದು ಕಿಡಿಕಾರಿದರು.

ಹರಿಕೃಷ್ಣ ಮಿಸ್ಸಿಂಗ್

ಶಿವರಾತ್ರಿ ದಿನ ಸಂಜೆ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜನಾರ್ದನ ಪೂಜಾರಿ  ಪರಮಾಪ್ತ, ಬಲಗೈ ಬಂಟ ಹರಿಕೃಷ್ಣ ಬಂಟ್ವಾಳ್ ನಾಪತ್ತೆಯಾಗಿರುವುದು ವಿಶೇಷವಾಗಿತ್ತು.

ಅವರಲ್ಲದೆ ಸಂಘಪರಿವಾರದ ಕಲ್ಲಡ್ಕ ಸಹಿತ ಯಾವುದೇ ಹಿಂದೂತ್ವವಾದಿ ಪಕ್ಷದ ಮುಖಂಡರು ಪುಸ್ತಕ ಮರುಬಿಡುಗಡೆ ಸಮಾರಂಭದಲ್ಲಿ ಕಂಡುಬರಲಿಲ್ಲ.

LEAVE A REPLY