ದುರಸ್ತಿ ಕಾಮಗಾರಿಗಾಗಿ ಕಾಯುತ್ತಿರುವ ದ ಕ ಜಿಲ್ಲೆಯ 275 ಪ್ರಾಥಮಿಕ ಶಾಲೆಗಳು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಂಪೂರ್ಣ ನಾದುರಸ್ತಿ ಸ್ಥಿತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲೆಗಳಿಗೆ ಶೀಘ್ರವೇ ಕಾಯಕಲ್ಪ ಭಾಗ್ಯ ಸಿಗಲಿದೆ. ದ ಕ ಜಿಲ್ಲೆಯ 275 ಪ್ರಾಥಮಿಕ ಶಾಲೆಗಳಲ್ಲಿ ದುರಸ್ತಿ ಕಾಮಗಾರಿಯನ್ನು ಶೀಘ್ರವೇ ನಡೆಸುವ ನಿಟ್ಟಿನಲ್ಲಿ 275 ಶಾಲೆಗಳ ಅಂದಾಜು ಪಟ್ಟಿಯನ್ನು ರಚಿಸಿ, ಎಪ್ರಿಲ್ ತಿಂಗಳ ಒಳಗಾಗಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಂ ಆರ್ ರವಿ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸರಕಾರಿ ಶಾಲೆಗಳ ಕಾಮಗಾರಿಯನ್ನು ನಿರ್ವಹಿಸಬೇಕಾದರೆ ಅನುದಾನದ ಅಗತ್ಯವಿದ್ದು, ಅಂದಾಜು ವೆಚ್ಚದ ವರದಿಯನ್ನು ಸರಕಾರಕ್ಕೆ ಕಳುಹಿಸಿಕೊಡಬೇಕು. ಪ್ರತೀ ತಾಲೂಕಿನ ಶಾಲೆಗಳ ವರದಿ ತಯಾರಿಸಲು ಪಿಡಬ್ಲ್ಯೂಡಿ ಇಲಾಖೆಯಿಂದ ಇಂಜಿನಿಯರುಗಳ ತಂಡವನ್ನು ರಚಿಸಿ ಕಾರ್ಯನಿರ್ವಹಿಸಬೇಕು ಎಂದವರು ಹೇಳಿದರು.

275 ಪ್ರಾಥಮಿಕ ಶಾಲೆಗಳಲ್ಲಿ ದುರಸ್ತಿ ಕಾರ್ಯದ ಅಗತ್ಯವಿದ್ದು, ಕೆಲವು ಶಾಲೆಗಳಿಂದ ವರದಿ ಬಂದಿದೆ. ಆದರೆ ಎಲ್ಲಾ ಶಾಲೆಗಳು ಅಂದಾಜು ವೆಚ್ಚದ ಪಟ್ಟಿಯನ್ನು ಕಳುಹಿಸಿಲ್ಲ. ಕೆಲವು ಶಾಲೆಗಳು ಖಾಸಗಿ ಇಂಜಿನಿಯರುಗಳನ್ನು ಅವಲಂಬಿಸಬೇಕಾಗಿರುವುದರಿಂದ ಅಂದಾಜು ಪಟ್ಟಿ ನೀಡಲು ವಿಳಂಬವಾಗಿದೆ ಎಂದು ಎಸ್ ಎಸ್ ಕೋ ಆರ್ಡಿನೇಟರ್ ಗೀತಾ ಹೇಳಿದರು.

ಶಾಲೆಗಳ ದುರಸ್ತಿ ಕಾಮಗಾರಿಯನ್ನು ಸಂಸದ ನಳಿನ್ ಅವರ ಸರ್ವ ಶಿಕ್ಷಣ ಅಭಿಯಾನದಡಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಸಚಿವರಿಂದ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷದವರ ನಡುವೆ ಮಾತಿನ ಸಮರ ನಡೆಯಿತು.