ಕುಮಟಾ ಅಳ್ವೆದಂಡೆಯಲ್ಲಿ 27 ಗುಡಿಸಲು ತೆರವು

ನಿನ್ನೆ ಮುಂಜಾನೆ ಪೊಲೀಸ್ ಬಲದೊಂದಿಗೆ ಕಾರ್ಯಾಚರಣೆ

ನಮ್ಮ ಪ್ರತಿನಿಧಿ ವರದಿ

ಕುಮಟಾ : ಕಲಭಾಗ ಗ್ರಾಮ ಪಂಚಾಯತ ವ್ಯಾಪ್ತಿಯ ಅಳ್ವೆದಂಡೆ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಲಾದ ಅನಧಿಕೃತ ಗುಡಿಸಲುಗಳನ್ನು ಇಂದು ಮುಂಜಾನೆಯೇ ತಾಲೂಕು ಆಡಳಿತ ತೆರವುಗೊಳಿಸಿತು.

ಕೆಲವು ದಿನಗಳ ಹಿಂದೆ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ ತಾಲೂಕು ಆಡಳಿತಕ್ಕೆ ಸ್ಥಳೀಯ ಮೀನುಗಾರರು ವಿವಿಧ ರಾಜಕೀಯ ಮುಖಂಡರ ನೇತೃತ್ವದಲ್ಲಿ ಪ್ರತಿರೋಧವೊಡ್ಡಿದ್ದರಿಂದ ತೆರವು ಕಾರ್ಯಾಚರಣೆಯನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಸ್ಥಳೀಯರಿಗೆ ಪ್ರತಿರೋಧ ನಡೆಸಲು ಅವಕಾಶ ನೀಡದಂತೆ ಕಾರ್ಯಾಚರಣೆ ನಡೆಸುವ ಚಿಂತನೆ ನಡೆಸಿದ ತಾಲೂಕು ಆಡಳಿತ ಮಂಗಳವಾರ ಬೆಳಗ್ಗಿನ ಜಾವವೇ 100ಕ್ಕೂ ಅಧಿಕ ಪೊಲೀಸ್ ಬಲದೊಂದಿಗೆ 3 ಜೆಸಿಬಿಯನ್ನು ಸ್ಥಳಕ್ಕೆ ಕರೆತಂದು ರಸ್ತೆಯ ಇಕ್ಕೆಲಗಳಲ್ಲಿರುವ ಮನೆ, ಶೌಚಾಲಯ ಸೇರಿದಂತೆ ಸುಮಾರು 27 ಗುಡಿಸಲುಗಳನ್ನು ಸಂಪೂರ್ಣ ನೆಲಸಮಗೊಳಿಸಿತು.

ಮೀನುಗಾರರ ಆಕ್ರೋಶ

“ಏಪ್ರಿಲ್ 6ರಂದು ಗುಡಿಸಲು ತೆರವು ಕಾರ್ಯಾಚರಣೆ ನಡೆಸಲು ಆಗಮಿಸಿದ ತಾಲೂಕು ಆಡಳಿತದ ಅಧಿಕಾರಿಗಳು ಒಂದು ವಾರದ ಕಾಲಾವಕಾಶ ನೀಡಿದ್ದರು. ಆದರೆ ಮಂಗಳವಾರ ಏಕಾಏಕಿ ಕಳ್ಳರಂತೆ ನಸುಕಿನ ಜಾವದಲ್ಲಿ ಆಗಮಿಸಿದ ಅಧಿಕಾರಿಗಳು ಅನಾದಿ ಕಾಲದಿಂದ ಮೀನುಗಾರಿಕಾ ಸಲಕರಣೆಗಳನ್ನು ಶೇಖರಿಸಿಡುವ ಗುಡಿಸಲುಗಳನ್ನು ತೆರವು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ರಾಜಕೀಯ ಮುಖಂಡರಿಗೆ ಸಮಸ್ತ ಮೀನುಗಾರರು ತಕ್ಕ ಪಾಠ ಕಲಿಸಲಿದ್ದೇವೆ” ಎಂದು ಮೀನುಗಾರ ಮುಖಂಡ ಸುಧಾಕರ ತಾರಿ ಸೇರಿದಂತೆ ಹಲವು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.