ಮೋದಿ ಸರಕಾರವನ್ನು ಪೆಡಂಬೂತದಂತೆ ಕಾಡಲಿದೆ 2002ರ ಗುಜರಾತ್ ದೊಂಬಿ

ನವದೆಹಲಿ : 2002ರ ಗುಜರಾತ್ ಗಲಭೆಗಳ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿದ್ದ ವಿಶೇಷ ತನಿಖಾ ಪಡೆಯಿಂದ ಮುಖ್ಯಸ್ಥ ಆರ್ ಕೆ ರಾಘವನ್ ಅವರಿಗೆ ನಿವೃತ್ತಿ ನೀಡಿದ ನಂತರವೂ ಸುಪ್ರೀಂ ಕೋರ್ಟ್ ತನಿಖೆಯನ್ನು ಮುಂದುವರೆಸಲು ನಿರ್ಧರಿಸಿದ್ದು ತನಿಖಾ ಪಡೆ ಇನ್ನು ಮುಂದೆಯೂ ಸಹ ಎಂದಿನಂತೆ ಮೂರು ತಿಂಗಳಿಗೊಮ್ಮೆ ಕೋರ್ಟ್‍ಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಮುಖ್ಯ ನ್ಯಾಯಾಧೀಶ ಜೆ ಎಸ್ ಕೇಹರ್ ಮತ್ತು ನ್ಯಾ ಚಂದ್ರಚೂಡ್ ಹಾಗೂ ಸಂಜಯ್ ಕಿಶನ್ ಕೌಲ್ ಅವರ ನ್ಯಾಯಪೀಠ ರಾಘವನ್ ಅವರನ್ನು ಬಿಡುಗಡೆ ಮಾಡಿದ್ದು ಮತ್ತೊಬ್ಬ ಸದಸ್ಯ ಎ ಕೆ ಮಲ್ಹೋತ್ರ ಅವರಿಗೆ ವಿಶೇಷ ತನಿಖಾ ಪಡೆಯ ಉಸ್ತುವಾರಿಯನ್ನು ನೀಡಲಾಗಿದೆ.

ಮತ್ತೊಬ್ಬ ಸದಸ್ಯ ವೆಂಕಟೇಶನ್ ಅವರಿಗೂ ಬಿಡುಗಡೆ ನೀಡಿರುವ ಕೋರ್ಟ್, ಮುಂದಿನ ಮುಖ್ಯಸ್ಥರನ್ನು ನೇಮಿಸುವವರೆಗೂ ಮಲ್ಹೋತ್ರ ಅವರು ನಿರ್ವಹಣೆ ಮಾಡುವಂತೆ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ಕೆಲವು ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಈ ಪ್ರಕರಣಗಳ ಬಗ್ಗೆಯೂ ತ್ರೈಮಾಸಿಕ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.

ಒಟ್ಟಾರೆ ಒಂಭತ್ತು ಪ್ರಕರಣಗಳನ್ನು ವಿಶೇಷ ತನಿಖಾ ಪಡೆ ನಿರ್ವಹಿಸುತ್ತಿದ್ದು ನರೋಡಾ ಗಾಮ್ ಪ್ರಕರಣದ ತನಿಖೆಯನ್ನೂ ಕೈಗೆತ್ತಿಕೊಂಡಿದೆ. ಎಂಟು ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದೆ ಎಂದು ವಿಶೇಷ ಪಡೆ ಕೋರ್ಟಿಗೆ ವರದಿ ಸಲ್ಲಿಸಿದ್ದ ಗುಜರಾತ್ ಹೈಕೋರ್ಟಿನಲ್ಲಿ ಈ ಪ್ರಕರಣಗಳ ಸಂಬಂಧ ಮೇಲ್ಮನವಿ ಸಲ್ಲಿಸಲಾಗಿದೆ.

ಗುಜರಾತಿನ ಗುಲ್ಬರ್ಗ್ ಸೊಸೈಟಿ, ಓಡ್, ಸಾದರ್‍ಪುರ, ನರೋಡಾವ್ ಗಾಂವ್, ನರೋಡಾ ಪಟ್ಯಾ, ಮಚ್ಚಿಪೀಟ್, ತರ್ಸಾಲಿ, ಪಂಡರವಾಡ ಮತ್ತು ರಾಘವಾಪುರದ ಘಟನೆಗಳು ವಿಚಾರಣೆಗೊಳಪಟ್ಟಿವೆ.

ಗೋಧ್ರಾ ಘಟನೆಯ ನಂತರದ ಗಲಭೆಗಳಲ್ಲಿ ಗುಜರಾತಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ದಂಗೆಗಳಲ್ಲಿ ಮೃತಪಟ್ಟಿದ್ದರು. ನರೊಡಾ ಪ್ರಕರಣದಲ್ಲಿ ಬಂದ್ ಆಚರಿಸುತ್ತಿದ್ದ ವೇಳೆ ಹನ್ನೊಂದು ಮಂದಿ ಮೃತಪಟ್ಟಿದ್ದರು. ವಿಶೇಷ ವಿಚಾರಣಾ ನ್ಯಾಯಾಲಯ ಗುಲ್ಬರ್ಗ್ ಸೊಸೈಟಿ ಮೊಕದ್ದಮೆಯಲ್ಲಿ ಈಗಾಗಲೇ 20 ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಈ ಘಟನೆಯಲ್ಲಿ 68 ಮುಸ್ಲಿಮರ ಹತ್ಯೆಯಾಗಿತ್ತು. ಮೃತ ವ್ಯಕ್ತಿಗಳ ಪೈಕಿ ಕಾಂಗ್ರೆಸ್ ಸಂಸದೆ ಎಶಾನ್ ಜಾಫ್ರಿ ಸಹ ಒಬ್ಬರಾಗಿದ್ದರು.