ಕಪಾಟಿನಡಿ ಸಿಲುಕಿದ್ದ ಅವಳಿ ಸಹೋದರನನ್ನು ರಕ್ಷಿಸಿದ ಸಾಹಸಿ 2 ವರ್ಷದ ಬಾಲಕ

ಕಪಾಟಿನಡಿ ಸಿಲುಕಿದ್ದ ತನ್ನ ಅವಳಿ ಸಹೋದರನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಬೌಡಿ

ಓರೆಂ, ಉಟಾಹ್ (ಅಮೆರಿಕ) : ಎರಡು ವರ್ಷದ ಸಾಹಸಿ ಬಾಲಕನೊಬ್ಬ ಭಾರವಾದ ಕಪಾಟೊಂದರ ಅಡಿಯಲ್ಲಿ ಸಿಲುಕಿದ್ದ ತನ್ನ ಅವಳಿ ಸಹೋದರನನ್ನು ಉಪಾಯದಿಂದ ರಕ್ಷಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಮಕ್ಕಳ ಬೆಡ್ ರೂಮಿನಲ್ಲಿ ನಡೆದ ಈ ಘಟನೆ ವೆಬ್ ಕ್ಯಾಮರಾ ಒಂದರಲ್ಲಿ ಸೆರೆಯಾಗಿದ್ದು ಅದರಲ್ಲಿ ಬೌಡಿ ಹಾಗೂ ಬ್ರಾಡ್ ಎಂಬ ಅವಳಿ ಸಹೋದರರು ಮೊದಲು ಶೆಲ್ಫ್ ಮೇಲಕ್ಕೆ ಹತ್ತುವ ದೃಶ್ಯವಿದ್ದು ನಂತರ ಶೆಲ್ಫ್ ನೆಲಕ್ಕೆ ಬಿದ್ದು ಬ್ರಾಡ್ ಅದರಡಿಯಲ್ಲಿ ಸಿಲುಕಿ ಒದ್ದಾಡುವ ದೃಶ್ಯವಿದೆ. ಇದನ್ನು ನೋಡಿದ ಬೌಡಿ ಜೋರಾಗಿ ಅಳುತ್ತಿದ್ದ ತನ್ನ ಪ್ರೀತಿಯ ಸಹೋದರನನ್ನು ಹೇಗಾದರೂ ರಕ್ಷಿಸಲೇ ಬೇಕು ಎಂಬ ಹಠದಿಂದ ಮೊದಲು ನೆಲಕ್ಕೆ ಬಿದ್ದಿದ್ದ ಕಪಾಟಿನ ಹಿಂದೆ ಹೋಗಿ ಅದನ್ನು ಸ್ವಲ್ಪ ದೂಡುತ್ತಾನೆ.  ನಂತರ ತನ್ನ ಸಹೋದರ ಸಿಕ್ಕಿ ಹಾಕಿಕೊಂಡ ಕಡೆಗೆ ಬಂದು ಸಾಕಷ್ಟು ಶ್ರಮ ಪಟ್ಟು ಕಪಾಟನ್ನು  ಸ್ವಲ್ಪ ಎತ್ತಿ ಆತ ಅದರಡಿಯಿಂದ ಆತ ತೆವಳಿ ಆಚೆ ಬರಲು ಸಹಾಯ ಮಾಡುತ್ತಾನೆ.

ಈ ಅವಳಿ ಸಹೋದರರ ಹೆತ್ತವರಾದ ರಿಕ್ಕಿ ಹಾಗೂ ಕೈಲಿ ಶಾಫ್  ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಮೊದಲು ಈ ವೀಡಿಯೊ ಪೋಸ್ಟ್ ಮಾಡಲು ನಾವು ಹಿಂಜರಿದೆವು. ನಂತರ ಇದೊಂದು ರೀತಿಯಲ್ಲಿ ಅಪಾಯದ ಬಗ್ಗೆ ಅರಿವನ್ನುಂಟು ಮಾಡಬಹುದು ಹಾಗೂ ನಮ್ಮ ಮಗುವಿನ ಸಾಹಸಿಕ ಕಾರ್ಯ ಹಾಗೂ ಅವಳಿ ಸಹೋದರರ ನಡುವೆ ಇರುವ ಅಪಾರ ಪ್ರೀತಿಯ ದ್ಯೋತಕವಾಗಿಯೆಂದು ಅರಿತು ಅದನ್ನು ಪೋಸ್ಟ್ ಮಾಡಿದೆವು” ಎಂದು ರಿಕ್ಕಿ ಹೇಳಿದ್ದಾರೆ.

ಕಪಾಟುಗಳು ಹಾಗೂ ಶೆಲ್ಫುಗಳು ಗೋಡೆಗೆ ಬೋಲ್ಟ್ ಮಾಡಿರುವಂತೆ ನೋಡಿಕೊಳ್ಳಿ ಎಂದೂ ಅವರು ಸಲಹೆ ನೀಡಿದ್ದಾರೆ. ಈ ವೀಡಿಯೊವನ್ನು ಹಲವು ಹೆತ್ತವರು ಪ್ರಶಂಸಿಸಿ ಅದನ್ನು ಶೇರ್ ಕೂಡ ಮಾಡಿದ್ದಾರೆ.