ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಸಾವು

ಸಾಂದರ್ಭಿಕ ಚಿತ್ರ

ಹೊನ್ನಾವರ : ತಾಲೂಕಿನ ಹೈಗುಂದ ಸಮೀಪದ ಶರಾವತಿ ನದಿಯಲ್ಲಿ ಶುಕ್ರವಾರ ಈಜಲು ಹೋದ ಅಳ್ಳಂಕಿ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಾಲೂಕಿನ ಗುಣವಂತೆಯ ನಿವಾಸಿ ಗೌರೀಶ ಮಂಜುನಾಥ ಗೌಡ ಮತ್ತು ಜಲವಳಕರ್ಕಿಯ ಜಗದೀಶ ಮಾದೇವ ಮಹಾಲೆ ಮೃತಪಟ್ಟ ವಿದ್ಯಾರ್ಥಿಗಳು. ಇವರು ಅಳ್ಳಂಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರ ತಮ್ಮ ಕಾಲೇಜು ಅವಧಿಯನ್ನು ಮುಗಿಸಿ ಗೌರೀಶ ಗೌಡ, ಜಗದೀಶ ಮಹಾಲೆ ಹಾಗೂ ಚರಣರಾಜ ಅವರು ದೂರದ ಹೈಗುಂದ ಶರಾವತಿ ನದಿ ತೀರ ಪ್ರದೇಶಕ್ಕೆ ಈಜಲು ಹೋಗಿದ್ದರು.

ಈ ವಿದ್ಯಾರ್ಥಿಗಳು ಸೇತುವೆಯ ಅಡಿಪಾಯದ ದಿಬ್ಬದ ಮೇಲಿನಿಂದ ನದಿಗೆ ದುಮುಕಿದ್ದರು. ಸೇತುವೆಯ ತಳಭಾಗದಲ್ಲಿ ನೀರಿನ ಹರಿವು ಜಾಸ್ತಿಯಿರುವುದರಿಂದ ಒಮ್ಮೆಲೆ ಇಬ್ಬರು ವಿದ್ಯಾರ್ಥಿಗಳನ್ನು ಸೆಳೆದುಕೊಂಡು ಹೋಗಿ ನದಿಯ ಆಳದಲ್ಲಿ ಸಿಲುಕಿಸಿರುವುದರಿಂದ ಮೃತಪಟ್ಟಿದ್ದಾರೆ. ಗಾಬರಿಗೊಂಡ ವಿದ್ಯಾರ್ಥಿ ಚರಣರಾಜ ಕಿರುಚಾಡಿದ್ದಾನೆ. ಆಗ ಅಲ್ಲಿನ ನೂರಾರು ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದು, ನದಿಯಲ್ಲಿ ನೆಲಕಚ್ಚಿದ್ದ ಇಬ್ಬರು ವಿದ್ಯಾರ್ಥಿಗಳ ಶವವನ್ನು ಹೊರತೆಗೆದಿದ್ದಾರೆ. ತನ್ನ ಗೆಳೆಯರಿಬ್ಬರು ನೀರುಪಾಲಾಗಿರುವ ದೃಶ್ಯವನ್ನು ನೋಡಿ ಭಯಭೀತನಾದ ಚರಣರಾಜನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY