ರಸ್ತೆ ಹೊಂಡಗಳನ್ನು ಮುಚ್ಚಿ ಮಾದರಿಯಾದ 2 ವಿದ್ಯಾರ್ಥಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಳೆಗಾಲದಲ್ಲಿ ಅದೆಷ್ಟೋ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿ ಸಾರ್ವಜನಿಕರಿಗೆ ಅನಾನುಕೂಲ ಸೃಷ್ಟಿಸಿದ್ದರೆ, ಇಂತಹ ಸಂದರ್ಭದಲ್ಲೂ ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಇಬ್ಬರು ಉತ್ಸಾಹಿ ಯುವಕರು.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿಶ್ವರಾಜ್ ಮತ್ತು ಐಟಿಐ ವಿದ್ಯಾರ್ಥಿ ದೀಕ್ಷಿತ್ ಇಬ್ಬರೂ ಕೊಪ್ಪಳ ಮೂಲದವರು ಹಾಗೂ ಸ್ನೇಹಿತರು. ಸೋಮವಾರ ಅವರಿಬ್ಬರೂ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಬದನಾಜೆಯಿಂದ ಕುಂದಡ್ಕ ತನಕದ 2 ಕಿ ಮೀ ಉದ್ದದ ರಸ್ತೆಯ ಹೊಂಡಗುಂಡಿಗಳನ್ನು ಲಭ್ಯವಿರುವ ಸಂಪನ್ಮೂಲಗಳಿಂದ ಮುಚ್ಚಿ ದುರಸ್ತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ. ಪುತ್ತೂರು ನಗರಕ್ಕೆ ಸಂಪರ್ಕ ರಸ್ತೆಯಾಗಿರುವ ಹೊರತಾಗಿಯೂ ಜನರು ಹಾಗೂ ವಾಹನ ಸವಾರರು ಈ ರಸ್ತೆಯ ಪರಿಸ್ಥಿತಿಯನ್ನು ಕಂಡು ಈ ಮೂಲಕ ಪ್ರಯಾಣಿಸುತ್ತಿರಲಿಲ್ಲ. ಮೇಲಾಗಿ ಈ ರಸ್ತೆ ದುರಸ್ತಿ ಕಾಣದೆ 20ರಿಂದ 25 ವರ್ಷಗಳೇ ಆಗಿವೆ ಎನ್ನಲಾಗಿದೆ. “ನಮ್ಮ ಕೈಲಾದಷ್ಟು ಸಹಾಯ ಮಾಡುವುದು ನಮ್ಮ ಉದ್ದೇಶ. ಈ ಪ್ರದೇಶದ ಇತರರಿಗೆ ನಮ್ಮ ಕೆಲಸ ಒಂದು ಉತ್ತಮ ಉದಾಹರಣೆಯಾಗಬೇಕು” ಎನ್ನುತ್ತಾರೆ ದೀಕ್ಷಿತ್. “ಈ ರೀತಿಯ ಕೆಲಸದಿಂದ ನಮಗೆ ಖುಷಿಯಿದೆ. ಇಡೀ 9 ಕಿ ಮೀ ಉದ್ದದ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ನಮ್ಮಿಂದಾದಷ್ಟು ನಾವು ಪ್ರಯತ್ನಿಸುತ್ತೇನೆ” ಎನ್ನುತ್ತಾರೆ ಅವರು. ಇಬ್ಬರೂ ಸೋಮವಾರ ರಸ್ತೆಯಲ್ಲಿದ್ದ ಗುಂಡಿಗಳನ್ನು ಗಿಡ ಹಾಗೂ ಬಳ್ಳಿಗಳನ್ನು ಬಳಸಿ ಮುಚ್ಚಿದ್ದಾರೆ. ಮಳೆ ನೀರು ಸಾಗಿ ಹೋಗಲೂ ಅನುವು ಮಾಡಿಕೊಟ್ಟಿದ್ದಾರೆ.

ಲೋಕೋಪಯೋಗಿ ಅಧಿಕಾರಿಗಳ ಪ್ರಕಾರ ಯಾವುದೇ ರಸ್ತೆಯನ್ನು ಮಳೆಗಾಲದ ನಂತರವಷ್ಟೇ ದುರಸ್ತಿ ಪಡಿಸಬಹುದಾಗಿದೆ. ಸ್ಥಳೀಯ ಶಾಸಕಿ ಶಕುಂತಳಾ ಶೆಟ್ಟಿ ಕೂಡ ಈ ರಸ್ತೆ ಮಳೆಗಾಲದ ನಂತರ ದುರಸ್ತಿಗೊಳ್ಳಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.