ಉಗ್ರಪ್ಪ ದೂರಿನಂತೆ ಇಬ್ಬರು ರಾಘವೇಶ್ವರ ಭಕ್ತರ ಬಂಧನ

ಉಗ್ರಪ್ಪ

ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಪ್ರಚಾರ

ಬೆಂಗಳೂರು : ಮಹಿಳೆಯರು ಮತ್ತು ಮಕ್ಕಳ ಶಾಸಕಾಂಗ ಸಮಿತಿಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ವಿ ಎಸ್ ಉಗ್ರಪ್ಪ ನೀಡಿದ ದೂರಿಗ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ಅರುಣ್ ಕುಮಾರ್ ಹೆಗಡೆ (50) ಮತ್ತು ದಾವರಣಗೆರೆಯ ಪ್ರದೀಪ್ ಕುಮಾರ್ (35) ಬಂಧಿತ ಆರೋಪಿಗಳಾಗಿದ್ದಾರೆ. ಪ್ರದೀಪನು ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದರೆ, ಅರುಣ್ ಡಿಪ್ಲೊಮಾ ಪದವೀಧರನಾಗಿದ್ದು, ಈತ ಶಿವಮೊಗ್ಗದಲ್ಲಿ ಎಲೆಕ್ಟ್ರಿಕಲ್ ಅಂಗಡಿಯೊಂದು ಹೊಂದಿದ್ದಾನೆ.

ಇವರಿಬ್ಬರು ಉಗ್ರಪ್ಪ ಮತ್ತು ಕಾಂಗ್ರೆಸ್ಸಿನ ವಿರುದ್ಧ ಫೇಸ್ಬುಕ್ ಮತ್ತು ವಾಟ್ಸಪ್ಪಿನಲ್ಲಿ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಉಗ್ರಪ್ಪರು ಇತ್ತೀಚೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ಮಾಡಿರುವ ಹೇಳಿಕೆಗಳಿಗಾಗಿ ಟೀಕೆಗೆ ಗುರಿಯಾಗಿದ್ದಾರೆಂದು ಪೊಲೀಸರು ತಿಳಿಸಿದರು.

ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಸ್ವಾಮಿಯ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ ಎಂದು ಉಗ್ರಪ್ಪ ಹೇಳಿದ್ದರು. ಈ ಕಾರಣಕ್ಕಾಗಿ ಆರೋಪಿಗಳಿಬ್ಬರು ಉಗ್ರಪ್ಪರ ವಿರುದ್ಧ ಸಾಮಾಜಿಕ ತಾಣದಲ್ಲಿ ಅಶ್ಲೀಲವಾಗಿ ಟೀಕಿಸಿದ್ದಾರೆ.

“ಇವರು ಉಗ್ರಪ್ಪ, ಕಾಂಗ್ರೆಸ್ ಪಕ್ಷ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿದ್ದಾರೆ. ಈ ಕುರಿತು ಐಟಿ ಕಾಯ್ದೆಯ ಸೆಕ್ಷನ್ 66(ಎ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಸ್ತøತ ವಿಚಾರಣೆ ಮುಂದುವರಿದಿದೆ” ಎಂದು ಪೊಲೀಸರು ಹೇಳಿದರು.