ಆಸ್ಟ್ರೇಲಿಯಾದಲ್ಲಿ ಅದಾನಿ ಕಲ್ಲಿದ್ದಲು ಯೋಜನೆಗೆ ಸಾಲ ಕೊಡಲು 2 ದೊಡ್ಡ ಬ್ಯಾಂಕುಗಳ ನಕಾರ

A protester holds a sign as he participates in a national Day of Action against the Indian mining company Adani's planned coal mine project in north-east Australia, at Sydney's Bondi Beach in Australia, October 7, 2017. REUTERS/David Gray

ಮೆಲ್ಬೋರ್ನ್ : ಆಸ್ಟ್ರೇಲಿಯಾದಲ್ಲಿ ಅದಾನಿ ಸಂಸ್ಥೆಯ ಪ್ರಸ್ತಾವಿತ ಹಾಗೂ ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿರುವಂತೆಯೇ ಜಗತ್ತಿನ ಎರಡು ಅತ್ಯಂತ ದೊಡ್ಡ ಬ್ಯಾಂಕುಗಳು ಈ ಯೋಜನೆಗೆ ಹಣಕಾಸು ಸಹಾಯ ಒದಗಿಸಲು ನಿರಾಕರಿಸಿವೆ.

ಚೀನಾ ಕನಸ್ಟ್ರಕ್ಷನ್ ಬ್ಯಾಂಕ್ ತಾನು ಈ ಯೋಜನೆಯ ಜತೆಗೆ ಯಾವುದೇ ಸಂಬಂಧ ಹೊಂದಲು ಇಚ್ಛಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದರೆ ಇದೀಗ ಇಂಡಸ್ಟ್ರಿಯಲ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ (ಐಸಿಬಿಸಿ) ಕೂಡ ತನಗೆ ಅದಾನಿ ಸಂಸ್ಥೆ ಕ್ವೀನ್ಸ್ ಲ್ಯಾಂಡಿನಲ್ಲಿ ಸ್ಥಾಪಿಸಲಿರುವ ಗಣಿಗಾರಿಕೆಗೆ ಸಾಲ ನೀಡುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿ ಅದಾನಿ ಸಂಸ್ಥೆಗೆ ದೊಡ್ಡ ಹೊಡೆತ ನೀಡಿದೆ.

ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಯುರೋಪ್ ದೇಶದ ಪ್ರಮುಖ ಬ್ಯಾಂಕುಗಳು ಈ ಯೋಜನೆಗೆ ಸಾಲವೊದಗಿಸಲು ಈ ಹಿಂದೆಯೇ ನಿರಾಕರಿಸಿರುವುದರಿಂದ ಚೀನಾದ ಈ ಪ್ರಮುಖ ಬ್ಯಾಂಕುಗಳಿಂದ ಹಣಕಾಸು ಸಹಾಯ ಪಡೆಯುವುದು ಅದಾನಿಗಿದ್ದ ಕೊನೆಯ ಆಯ್ಕೆಯಾಗಿತ್ತು. ಇದೀಗ ಈ ಬ್ಯಾಂಕುಗಳೂ ನಕಾರಾತ್ಮಕ ಉತ್ತರ ನೀಡಿರುವುದರಿಂದ ಈ ಪ್ರಸ್ತಾವಿತ ಯೋಜನೆಗೆ ಹಿನ್ನಡೆಯಾಗಿದ್ದು, ಅದಾನಿ ಸಂಸ್ಥೆ ಇದೀಗ ಪಬ್ಲಿಕ್ ಫಂಡಿಂಗ್  ಅವಲಂಬಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದೆ.

ಚೀನಾ ಮೆಶಿನರಿ ಇಂಜಿನಿಯರಿಂಗ್ ಕಾರ್ಪೊರೇಶನ್ (ಸಿಇಎಂಸಿ) ಜತೆ ಒಪ್ಪಂದ ಸಾಧಿಸಿ ಕಾರ್ಮೈಕಲ್ ಗಣಿಗಾರಿಕೆ ಹಾಗೂ ರೈಲು ಯೋಜನೆ ಜಾರಿಗೊಳಿಸಬೇಕೆಂದು ಅದಾನಿ ಸಂಸ್ಥೆ ಇಚ್ಛಿಸಿದ್ದರೂ ಈ ಸಂಸ್ಥೆಗೂ ಚೀನಾದ ಬ್ಯಾಂಕುಗಳಿಂದ ಆರ್ಥಿಕ ಬೆಂಬಲ ದೊರೆಯುವುದು ಅತ್ಯವಶ್ಯವಾಗಿದೆ.

ಕಾರ್ಮೈಕಲ್ ಗಣಿ ಆರಂಭದ ದಿನಾಂಕವನ್ನು ಅದಾನಿ ಸಂಸ್ಥೆ ಹಲವಾರು ಬಾರಿ ಮುಂದೂಡಿದ್ದು, ಈ ವರ್ಷದ ಅಂತ್ಯದೊಳಗೆ ಯೋಜನೆಗೆ ಹಣಕಾಸು ಸೌಲಭ್ಯ ಹೊಂದಿಸುವುದಾಗಿ ಮೊದಲು ಹೇಳಿದ್ದ ಸಂಸ್ಥೆ ನಂತರ ಮಾರ್ಚ್ ಅಂತ್ಯದೊಳಗೆ ಇದು ಸಾಧ್ಯವಾಗಬಹುದೆಂದು ತಿಳಿಸಿದೆ.

ಆರ್ಥಿಕವಾಗಿ ಈ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಹಲವಾರು ಸಂಶಯಗಳಿರುವುದರಿಂದ ಹಾಗೂ ಇತ್ತೀಚಿಗಿನ ವರ್ಷಗಳಲ್ಲಿ ಮರುಬಳಕೆ ಮಾಡಬಹುದಾದಂತಹ ಇಂಧನ ಮೂಲಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿರುವುದರಿಂದ ಇಂತಹ ಒಂದು ಪರಿಸರ ವಿನಾಶಿ ಯೋಜನೆಗೆ ಸಹಕಾರ ನೀಡಲು ಯಾರೂ ಮುಂದೆ ಬರುತ್ತಿಲ್ಲ.