ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ : ಇಬ್ಬರಿಗೆ ಗಂಭೀರ ಗಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಶಿರವಾಡದ ಆಲಿವ್ ಗಾರ್ಡನ್ ಎಂಬ ರೆಸಾರ್ಟಿನಲ್ಲಿ ರವಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಿಂದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಕಾರವಾರ ವಾಗ್ಳೆವಾಡದ ಬ್ರಹ್ಮಕಟ್ಟಾದ ಸಂಜಯ ನಾಯ್ಕ, ಹಬ್ಬುವಾಡದ ಪ್ರದೀಪ ದುರ್ಗಾ ಗುನಗಿ ಎಂಬುವವರು ಗಾಯಗೊಂಡವರು. ರೆಸಾರ್ಟಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಹುಟ್ಟುಹಬ್ಬದ ಆಚರಣೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಇವರು ರೆಸಾರ್ಟಿನಲ್ಲಿ ವಿದ್ಯುತ್ ಕೆಲಸದಲ್ಲಿ ನಿರತರಾಗಿದ್ದಾಗ, ಕ್ಷುಲ್ಲಕ ಕಾರಣಕ್ಕೆ ಪ್ರವಾಸಿಗರಾದ ಗೋವಾದ ಪೊಂಡಾದ ನಿವಾಸಿಗಳಾದ ಸಿರಾಜ್ ಶೇಖ್, ಷರೀಫ್ ಖಾನ್, ಋತುರಾಜ್, ಜಾಕ್ಸನ್ ಫರ್ನಾಂಡಿಸ್, ಸೈಫಲಿ ಇರ್ಷಾದ್ ಅಲಿ ಖಾನ್ ಜಗಳ ಆರಂಭಿಸಿ, ಹಲ್ಲೆ ನಡೆಸಿದ್ದಾರೆ.

ನಂತರ ಮಾಹಿತಿ ಪಡೆದ ಗ್ರಾಮೀಣ ಠಾಣೆ ಪೊಲೀಸರು ಹಲ್ಲೆ ನಡೆಸಿದ ಪ್ರವಾಸಿಗರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ರೆಸಾರ್ಟಿನಲ್ಲಿ ಗೋವಾದ 5 ಮಂದಿ ಯುವಕರು ಸಂಗೀತ ಹಾಕಿಕೊಂಡು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇಲೆಕ್ಟ್ರಿಕಲ್ ಹಾಗೂ ಡೆಕಾರೇಶನ್ ಕೆಲಸಕ್ಕೆ ಬಂದಿದ್ದ ಸ್ಥಳೀಯರಿಬ್ಬರ ಜೊತೆ ಮಾತಿನ ಚಕಮಕಿ ನಡೆದು, ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.