ಸೌದಿಯಲ್ಲಿ ಸಂಕಟದಲ್ಲಿರುವ ಹೈದರಾಬಾದ್ ಮಹಿಳೆಯರು

ಹೈದರಾಬಾದ್ : ಸೌದಿ ಅರೇಬಿಯಾದಲ್ಲಿ ಬ್ಯುಟಿಷಿಯನ್ ಕೆಲಸ ದೊರಕಿಸುವ ಭರವಸೆ ಏಜಂಟರಿಂದ  ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರಯಾಣಿಸಿದ್ದ ನಗರದ ಇಬ್ಬರು ಮಹಿಳೆಯರಾದ ಅರ್ಷಿಯಾ ಬೇಗಂ ಹಾಗೂ ಹಲೀಮುನ್ನೀಸಾ ಈಗ ಅಲ್ಲಿ ಮನೆಗೆಲಸದವರಾಗಿ ಕರ್ತವ್ಯ ನಿರ್ವಹಿಸಬೇಕಾಗಿ ಬಂದಿದ್ದು  ಕಷ್ಟದಲ್ಲಿದ್ದಾರೆ. ಅರ್ಷಿಯಾ ಬೇಗಂ ಪತಿ ಇಬ್ರಾಹಿಂ ಆಲಿ ಪ್ರಕಾರ  ಆದಿಲ್ ಎಂಬ ಏಜಂಟ್ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ  ಆಕೆ  ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ  ತೆರಳಿದ್ದು ಜೆಡ್ಡಾದಲ್ಲಿ ಆಕೆಗೆ ಮನೆಗೆಲಸ ವಹಿಸಲಾಗಿದೆಯಲ್ಲದೆ ಮೂರು ತಿಂಗಳ ವೇತನ ಮಾತ್ರ ದೊರೆತಿದೆ ಎಂದು ದೂರಿದ್ದಾರೆ. ಅದೇ ರೀತಿ ಹಲೀಮುನ್ನೀಸಾಳ ಮಾಲಿಕ ಆಕೆಗೆ ಕಿರುಕುಳ ನೀಡುತ್ತಿದ್ದಾನೆ ಹಾಗೂ ಅಲ್ಲಿಂದ ಬಿಡುಗಡೆ ಹೊಂದಬೇಕಾದರೆ ರೂ 6 ಲಕ್ಷ ಬೇಡಿಕೆಯಿಟ್ಟಿದ್ದಾನೆ ಎಂದು ಆಕೆಯ ಸಹೋದರ ದೂರಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸುವಂತೆ ಕೋರಲಾಗಿದೆ.