ವ್ಯಾನ್-ಬಸ್ ಡಿಕ್ಕಿ : ಇಬ್ಬರ ದುರ್ಮರಣ

ಮೃತ ಯುವಕರು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೋಳಿ ಸಾಗಾಟ ಮಾಡುತ್ತಿದ್ದ ವ್ಯಾನಿಗೆ ವಾಲ್ವೋ ಬಸ್ ಡಿಕ್ಕಿ ಹೊಡೆದ ಅಪಘಾತದಲ್ಲಿ ವ್ಯಾನ್ ಘಟನಾ ಸ್ಥಳದಲ್ಲೇ ಬೆಂಕಿಗಾಹುತಿಯಾಗಿ ವ್ಯಾನಿನಲ್ಲಿದ್ದ ಚಾಲಕ ಸಹಿತ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂಬಳೆ ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಕೊಪ್ಪರ ಬಜಾರಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಮನೆಗೆ ಗುದ್ದಿರುವ ಬಸ್
ಮನೆಗೆ ಗುದ್ದಿರುವ ಬಸ್

ಅಪಘಾತದಲ್ಲಿ ವ್ಯಾನಿನಲ್ಲಿ ತುಂಬಿಸಿಡಲಾಗಿದ್ದ ಸುಮಾರು 500ರಷ್ಟು ಕೋಳಿಗಳು ಕರಟಿಹೋಗಿದೆ. ಅಪಘಾತದಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹಿತ್ತಲಿಗೆ ನುಗ್ಗಿ ಜನವಾಸವಿಲ್ಲದ ಮನೆಗೆ ಬಡಿದು ನಿಂತಿದೆ. ಮನೆಗೆ ಹಾಗೂ ಹಿತ್ತಲಿಗೆ ಭಾರೀ ಹಾನಿಯಾಗಿದೆ. ಬಸ್ಸಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೋಳಿ ಸಾಗಾಟ ವ್ಯಾನಿನಲ್ಲಿದ್ದ ಪರಪ್ಪ ಪಳ್ಳಂಜೆ ಮೂಲೆ ನಿವಾಸಿ ಉಜ್ವಲನಾಥ್ (19) ಹಾಗೂ ಚೆರ್ಕಳ ಬಾಲಡ್ಕ ನಿವಾಸಿ ಮಶ್ಹೂದ್ (21) ಸಾವನ್ನಪ್ಪಿದಾರೆ.

ಚಾಲಕನ ಸೀಟಿನಲ್ಲಿ ಕುಳಿತಿದ್ದ ಉಜ್ವಲನಾಥ್ ಹೊರ ಬರಲಾರದೆ ವ್ಯಾನಿನೊಳಗೆ ಸಜೀವ ದಹನವಾದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಹೊರಗೆಸೆಯಲ್ಪಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯ ಕುರುಚಲು ಪೊದೆಯಲ್ಲಿ ಗಂಭೀರಾವಸ್ಥೆಯಲ್ಲಿ ಬಿದ್ದಿದ್ದ ಮಶ್ಹೂದನನ್ನು ಊರವರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ. ಬಸ್ ಚಾಲಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುದ್ದಿಯರಿತು ತಕ್ಷಣ ಧಾವಿಸಿದ ಕಾಸರಗೋಡು ಅಗ್ನಿಶಾಮಕದಳದವರು ಭಾರೀ ಸಂಖ್ಯೆಯಲ್ಲಿ ಸೇರಿದ ನಾಗರಿಕರ ನೆರವಿನೊಂದಿಗೆ ನೀರನ್ನು ಹಾಯಿಸಿ ಬೆಂಕಿಯನ್ನಾರಿಸಿದ್ದರು. ಆದರೆ ನುಜ್ಜುಗುಜ್ಜಾದ ವ್ಯಾನಿನೊಳಗೆ ಸಿಲುಕಿದ್ದ ಉಜ್ವಲನಾಥ್ ಅಷ್ಟರಲ್ಲೇ ಪ್ರಾಣಕಳಕೊಂಡಿದ್ದರು. ಉಜ್ವಲನಾಥ್ ಸೊಂಟದಿಂದ ಕೆಳಭಾಗ ಸಂಪೂರ್ಣ ಬೆಂದ ಸ್ಥಿತಿಯಲ್ಲಿತ್ತು. ವ್ಯಾನ್ ಮುಂಭಾಗ ಒಡೆದು ಈತನನ್ನು ಹೊರತೆಗಿಯಲಾಗಿದೆ. ವ್ಯಾನಿನಲ್ಲಿ ಎಂಟು ಪೆಟ್ಟಿಗೆಗಳಲ್ಲಿರಿಸಲಾಗಿದ್ದ 500ರಷ್ಟು ಕೋಳಿಗಳು ಬೆಂಕಿಯ ಕೆನ್ನಾಲಗೆಗೆ ವಿಲವಿಲನೆ ಒದ್ದಾಡಿ ಪ್ರಾಣತೆತ್ತಿವೆ.