ಪ್ರತ್ಯೇಕ ರಸ್ತೆ ದುರಂತ : ಇಬ್ಬರ ಸಾವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಬಂದರ್ ಧಕ್ಕೆ ಬಳಿ ಸಂಭವಿಸಿದೆ.

ಮೃತರನ್ನು ಮೋರ್ಗನ್ಸ್‍ಗೇಟ್ ನಿವಾಸಿ ಇಸ್ಮಾಯಿಲ್ ಬೋಳಾರ (63) ಎಂದು ಗುರುತಿಸಲಾಗಿದೆ. ಮೀನು ವ್ಯಾಪಾರಿಯಾಗಿದ್ದ ಇವರು ವ್ಯಾಪಾರ ನಿಮಿತ್ತ ಧಕ್ಕೆಗೆ ನಡೆದು ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕೂಡಲೇ ಇತರ ಮೀನುಗಾರರು ಸೇರಿಕೊಂಡು ಇವರನ್ನು ಫಳ್ನೀರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕುಳಾಯಿ ಬಳಿಯ ನಿವಾಸಿ ಮಹಾಬಲೇಶ್ವರ ಎಂಬವರು ಸಾವನ್ನಪ್ಪಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.