ಪ್ರತ್ಯೇಕ ಅಪಘಾತ : ಇಬ್ಬರು ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಪ್ರತ್ಯೇಕ ಅಪಘಾತದಲ್ಲಿ ಸೆಕ್ಯೂರಿಟಿ ಗಾರ್ಡ್ ಸಹಿತ ಇಬ್ಬರು ಸ್ಕೂಟಿ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿ ನಗರ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಎಂಜಿಎಂ ಕಾಲೇಜು ಬಳಿಯ ಹೊಂಡಾ ಮ್ಯಾಟ್ರಿಕ್ಸ್ ಶೋರೂಮ್ ಎದುರು ಎದುರು ಸಂಭವಿಸಿದೆ. ನಗರದ ಕಿನ್ನಿಮುಲ್ಕಿ ಬಿ ಬಿ ನಗರ ಈಡನ್ ಗರಡಿ ಮುಖ್ಯ ರಸ್ತೆ ನಿವಾಸಿ ಎಡ್ವಿನ್ ಜೆ ಫೆರ್ನಾಂಡೀಸ್ ಗಂಭೀರ ಗಾಯಗೊಂಡು ಸ್ಕೂಟಿ ಸವಾರ. ಎಡ್ವಿನ್ ತನ್ನ ಸ್ಕೂಟಿಯಲ್ಲಿ ಉಡುಪಿಯಿಂದ ಎಂಜಿಎಂ ಕಡೆಗೆ ಹೋಗುತ್ತಿದ್ದ ವೇಳೆ ಶ್ಯಾಮ್ ಪ್ರಸಾದ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಡ್ವಿನ್ ಸ್ಕೂಟಿ ಸಮೇತ ರಸ್ತೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಶ್ಯಾಮ್ ಪ್ರಸಾದ್ ವಿರುದ್ಧ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿದ್ದ ಸೆಕ್ಯೂರಿಟಿ ಗಾರ್ಡಿಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸೆಕ್ಯೂರಿಟಿ ಗಾರ್ಡ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಣಿಪಾಲ ಸಮೀಪದ ಪೆರಂಪಳ್ಳಿಯ ವಿಷ್ಣುಮೂರ್ತಿ ದೇವಳ ಬಳಿ ಸಂಭವಿಸಿದೆ.

ಪೆರಂಪಳ್ಳಿಯ ಸಾಯಿರಾಧ ಗ್ರೀನ್ ವ್ಯಾಲಿ ಅಪಾರ್ಟಮೆಂಟಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ, ಉಪ್ಪೂರು ಗ್ರಾಮದ ಕೊಳಲಗಿರಿ ನಾರ್ನಾಡು ಕಮಲಾನಿಲಯ ನಿವಾಸಿ ಕೃಷ್ಣ ಪೂಜಾರಿ ಗಂಭೀರ ಗಾಯಗೊಂಡ ಸ್ಕೂಟಿ ಸವಾರ. ಕೃಷ್ಣ ಪೂಜಾರಿಯು ರಾತ್ರಿ ಪಾಳಿಯ ಕೆಲಸವನ್ನು ಮುಗಿಸಿಕೊಂಡು ಮಂಗಳವಾರ ರಾತ್ರಿ ಸ್ಕೂಟಿಯನ್ನು ಚಲಾಯಿಸಿಕೊಂಡು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮನೆಗೆ ಕಡೆಗೆ ಹೋಗುತ್ತಿದ್ದ ವೇಳೆ ಪೆರಂಪಳ್ಳಿ ವಿಷ್ಣುಮೂರ್ತಿ ದೇವಳ ಬಳಿ ಗೂಡ್ಸ್ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರ ಕೃಷ್ಣ ಪೂಜಾರಿ ಸ್ಕೂಟಿ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೆ ಕಾರಣನಾದ ಆರೋಪಿ ಗೂಡ್ಸ್ ವಾಹನ ಚಾಲಕ ವಿರುದ್ಧ ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.