ಬೆಂಗಳೂರು ಐ ಟಿ ದಾಳಿ ಪ್ರಕರಣ : ಇಬ್ಬರು ಗುತ್ತಿಗೆದಾರರು ಸಿಬಿಐ ಬಲೆಗೆ

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ದಾಳಿಗಳಲ್ಲಿ  ಅಧಿಕಾರಿಗಳು ವಶಪಡಿಸಿಕೊಂಡಿದ್ದ ಬೃಹತ್ ಪ್ರಮಾಣದ ಹೊಸ 2000 ರೂಪಾಯಿ ನೋಟುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಇಬ್ಬರು ಗುತ್ತಿಗೆದಾರರಾದ ನಝೀರ್ ಅಹಮದ್ ಮತ್ತ ಚಂದ್ರಕಾಂತ್ ರಾಮಲಿಂಗಂ ಎಂಬವರನ್ನು ಬಂಧಿಸಿದೆ. ಇಬ್ಬರನ್ನೂ ಸಿಬಿಐ ವಿಶೇಷ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿದೆ.

ಶನಿವಾರದಂದು ಸಿಬಿಐ ಈ ಪ್ರಕರಣದಲ್ಲಿ ರಾಜ್ಯ ಹೆದ್ದಾರಿ  ಸುಧಾರಣಾ ಯೋಜನೆಯ ಮುಖ್ಯ ಯೋಜನಾಧಿಕಾರಿ ಹಾಗೂ ಇಬ್ಬರು ಬ್ಯಾಂಕರುಗಳೂ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್ ಐ  ಆರ್ ದಾಖಲಿಸಿತ್ತು.

ಕರ್ನಾಟಕ ಬ್ಯಾಂಕಿನ ಇಂದಿರಾನಗರ ಶಾಖೆಯ ಮುಖ್ಯ ಮ್ಯಾನೇಜರ್ ಸೂರ್ಯನಾರಾಯಣ ಬಾಯಿರಿ, ಧನಲಕ್ಷ್ಮಿ ಬ್ಯಾಂಕ್ ಮ್ಯಾನೇಜರ್ ಉಮಾಶಂಕರ್ ರೇಣುಕಾ, ಖಾಸಗಿ ಕಂಪೆನಿಯೊಂದರ ಇಬ್ರಾಹಿಂ ಸಯೀದ್ ಹಾಗೂ ಎಟಿಎಂಗಳಿಗೆ ಬ್ಯಾಂಕುಗಳಿಂದ ನೋಟುಗಳನ್ನು ತುಂಬಿಸುವ ಸಂಸ್ಥೆ ಸೆಕ್ಯೂರ್ ವ್ಯಾಲ್ಯು ಇಂಡಿಯಾ ಲಿಮಿಟೆಡ್ ಇದರ ಆಡಳಿತ ನಿದೇರ್ಶಕ ರವಿ ಗೋಯೆಲ್ ಅವರು ಈ ಪ್ರಕರಣದಲ್ಲಿ ಹೆಸರಿಸಲಾಗಿರುವ  ಇತರರು.

ಸಿಬಿಐ ಪ್ರಕಾರ ನವೆಂಬರ್ 30ರಂದು ಇಲಾಖೆ ನಡೆಸಿದ ದಾಳಿಗಳ ಸಂದರ್ಭ ಇಬ್ರಾಹಿಂ ಶರೀಫ್, ಜಯಚಂದ್ರ, ನಝೀರ್ ಅಹಮದ್ ಹಾಗೂ ಚಂದ್ರಕಾಂತ್ ರಾಮಲಿಂಗಂ ಬಳಿ ಕ್ರಮವಾಗಿ ಹೊಸ 2000 ಹಾಗೂ 500 ರೂಪಾಯಿ ಮುಖಬೆಲೆಯ ರೂ 4.80 ಕೋಟಿ, ರೂ 5 ಲಕ್ಷ, ರೂ 32.70 ಲಕ್ಷ ಹಾಗೂ ರೂ 46 ಲಕ್ಷ ಮೌಲ್ಯದ ನೋಟುಗಳ ಪತ್ತೆಯಾಗಿದ್ದವು.

ಇಲಾಖೆಯ ಪ್ರಕಾರ ಸೆಕ್ಯೂರ್ ವ್ಯಾಲ್ಯು ಇಂಡಿಯಾ ಸಂಸ್ಥೆಯು ಖಾಸಗಿ ಹಾಗೂ ಸರಕಾರಿ ರಂಗದ ಬ್ಯಾಂಕುಗಳ ಅಧಿಕಾರಿಗಳ ಶಾಮೀಲಾತಿಯೊಂದಿಗೆ  ಎಟಿಎಂಗಳಿಗೆ ತುಂಬಿಸಬೇಕಿದ್ದ ಹಣವನ್ನು ಆರೋಪಿಗಳಿಗೆ ನೀಡಿತ್ತಲ್ಲದೆ ಅವರು ಅವುಗಳನ್ನು ಹಳೆ ನೋಟುಗಳಿಗೆ ಬದಲಾಗಿ ಮಧ್ಯವರ್ತಿಗಳ ಮೂಲಕ ವಿನಿಮಯ ಮಾಡಿಸುತ್ತಿದ್ದರು.