ಮೂಡುಬಿದಿರೆ ಮಾರುಕಟ್ಟೆಗೆ 2 ಕಂಪೆನಿಯಿಂದ ಬಿಡ್ಡು ಸಲ್ಲಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಮೂಡುಬಿದಿರೆ ಪುರಸಭೆ ಮಾರುಕಟ್ಟೆಗೆ ಇಬ್ಬರು ಬಿಡ್ಡುದಾರರು ಇ-ಟೆಂಡರ್ ಸಲ್ಲಿಸಿದ್ದು, ಫೆಬ್ರವರಿ 16 (ಇಂದು) ಟೆಂಡರ್ ತೆರೆದು ಅಧಿಕೃತ ಬಿಡ್ಡುದಾರ ಘೋಷಣೆಯಾಗಲಿದೆ.

ನೂತನ ಮಾರುಕಟ್ಟೆಗೆ ಸಲ್ಲಿಕೆಯಾದ ಟೆಂಡರಿನಲ್ಲಿ ಒಂದು ಬೆಂಗಳೂರಿನ ಆರ್ ಕೆ ಇನಫ್ರಾ ಇಂಡಿಯಾ ಪ್ರೈ ಲಿ ಹಾಗೂ ಇನ್ನೊಂದು ಮಂಗಳೂರಿನ ರಾಮಂಶಿ ಇನಫ್ರಾಸ್ಟ್ರೆಕ್ಚರ್. ಫೆಬ್ರವರಿ 20ಕ್ಕೆ ಟೆಕ್ನಿಕಲ್ ಬಿಡ್ ಇವ್ಯಾಲ್ಯೂಯೇಶನ್ ನಡೆದು ಯಶಸ್ವಿ ಬಿಡ್ಡುದಾರರ ಆಯ್ಕೆಯಾಗಲಿದೆ. ಈ ಪ್ರಕ್ರಿಯೆಗಳೆಲ್ಲ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಬೆಂಗಳೂರು ಇಲ್ಲಿ ನಡೆಯಲಿದ್ದು, ಮೂಡುಬಿದಿರೆ ಕೌನ್ಸಿಲ್ ಸಭೆಯಲ್ಲಿ ಮಂಜೂರಾತಿ ದೊರಕಿದ ಬಳಿಕ ಅಧಿಕೃತ ಬಿಡ್ಡುದಾರರಿಗೆ ಟೆಂಡರ್ ಆದೇಶ ದೊರೆಯಲಿದೆ.

ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿರುವ ಮಾರುಕಟ್ಟೆಯ ಲೀಸ್ ಅವಧಿ 17 ವರ್ಷ ಆಗಲಿದೆ. ಇದರಲ್ಲಿ 2 ವರ್ಷ ಕಟ್ಟಡ ಕನಸ್ರ್ಟಕ್ಷನ್ ಅವಧಿಯಾದರೆ ಉಳಿದ 15 ವರ್ಷ ಮಾರುಕಟ್ಟೆ ಗುತ್ತಿಗೆದಾರರ ಸುಪರ್ದಿಯಲ್ಲಿರುತ್ತದೆ. ಏತನ್ಮಧ್ಯೆ ಬಿಡ್ಡುದಾರ ಲೀಸ್ ಅವಧಿಯನ್ನು ಈಗಿನ 17ರಿಂದ 20 ವರ್ಷಕ್ಕೆ ವಿಸ್ತರಿಸುವ ಬೇಡಿಕೆಯನ್ನು ಇಡಬಹುದು. ಅಥವಾ ಪುರಸಭೆಗೆ ನೀಡುವ ವಾರ್ಷಿಕ ಲೀಸ್ ಪೇಮೆಂಟ್ ರೂ 1.6 ಕೋಟಿ ಮೊತ್ತವನ್ನು ಕಡಿಮೆಗೊಳಿಸಬೇಕೆಂಬ ಬೇಡಿಕೆಯನ್ನು ಇಡುವ ಸಾಧ್ಯತೆಯಿದೆ. ಲೀಸ್ ಪೇಮೆಂಟ್ ಪ್ರತಿ ಷರುಷ ಶೇ 7.1 ರೂ ಏರಿಕೆಯಾಗುತ್ತದೆ.

ಹಾಲಿ ವ್ಯಾಪಾರಿಗಳಿಗೆ 68 ಕೋಣೆಗಳು

ಪುರಸಭೆ ಈ ಹಿಂದೆ ಸಮೀಕ್ಷೆ ನಡೆಸಿದ ಪ್ರಕಾರ ಹಾಲಿ 68 ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಯಲ್ಲಿ ಅಂಗಡಿ ಕೋಣೆ ನೀಡಲು ನಿರ್ಧರಿಸಿದ್ದು, ಈ ಕೋಣೆಗಳು ಪುರಸಭೆ ನಿಯಮ ಪ್ರಕಾರ ಏಲಂ ಮಾಡಿ ಹಸ್ತಾಂತರಿಸಲಿದೆ. ಸದ್ರಿ ವ್ಯಾಪಾರಿಗಳು ಹೊಸ ಅಂಗಡಿ ಕೋಣೆಗಳನ್ನು ಆಯ್ಕೆ ಮಾಡುವಾಗ ಅವರು ಈಗ ಹೊಂದಿರುವ ಅಂಗಡಿ ಕೋಣೆಗಿಂತ ಶೇ 10 ಹೆಚ್ಚು ಅಥವಾ ಶೇ 10 ಕಡಿಮೆ ವಿಸ್ತೀರ್ಣದ ಅಂಗಡಿಕೋಣೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.