ಮಕ್ಕಳಿಬ್ಬರು ಬಾವಿಗೆ ಬಿದ್ದು ದುರ್ಮರಣ

ಮಕ್ಕಳು ದುರ್ಮರಣಕ್ಕೊಳಗಾದ ಬಾವಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪುಟ್ಟ ಮಕ್ಕಳಿಬ್ಬರು ಬಾವಿಗೆ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಬದಿಯಡ್ಕ ಸಮೀಪದ ಪಿಲಾಂಕಟ್ಟೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮಕ್ಕಳ ಸಾವಿನಿಂದ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಪಿಲಾಂಕಟ್ಟೆ-ಉಬ್ರಂಗಳ ರಸ್ತೆ ನಿವಾಸಿ ಹಮೀದ್ ಎಂಬವರ ಪುತ್ರ ರಂಸಾನ್ (4), ಹಮೀದ್ ಸಹೋದರ ಶಬೀರ್ ಎಂಬವರ ಪುತ್ರ ನಸ್ವಾನ್ (2) ಮೃತ ದುರ್ದೈವಿಗಳಾಗಿದ್ದಾರೆ.

ಬೆಳಿಗ್ಗೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ದಿಢೀರ್ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸುತ್ತಿದ್ದಾಗ ಮನೆ ಅಂಗಳ ಬಳಿಯಲ್ಲೇ ಇರುವ ಬಾವಿಯಲ್ಲಿ ನೀರು ಕದಡುವುದು ಕಂಡುಬಂದಿದೆ. ವಿಷಯ ತಿಳಿದು ಪರಿಸರ ನಿವಾಸಿಗಳು ಬಾವಿಯಲ್ಲಿ ಶೋಧ ನಡೆಸಿದಾಗ ಮಕ್ಕಳು ಪತ್ತೆಯಾಗಿದ್ದಾರೆ. ಆದರೆ ಬಾವಿಯಿಂದ ಮೇಲಕ್ಕೆತ್ತುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದರು. ಬಾವಿಗೆ ಆವರಣ ಗೋಡೆಯಿದ್ದು ಗೋಡೆ ಸಮೀಪದಲ್ಲೇ ಜಲ್ಲಿಕಲ್ಲು ರಾಶಿ ಹಾಕಲಾಗಿತ್ತು. ಅದರ ಮೇಲೇರಿ ಆಟವಾಡುತ್ತಿದ್ದ ಮಕ್ಕಳು ಜಾರಿ ಬಾವಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆಯೆಂದು ಅಂದಾಜಿಸಲಾಗಿದೆ.

ಇಬ್ಬರು ಮಕ್ಕಳ ತಂದೆಯಂದಿರು ಸಹೋದರರಾಗಿದ್ದು, ಅವರಿಬ್ಬರೂ ಕೊಲ್ಲಿ ರಾಷ್ಟ್ರದಲ್ಲಿದ್ದಾರೆ. ಬದಿಯಡ್ಕ ಪೆÇಲೀಸರು ಸ್ಥಳಕ್ಕೆ ಬಂದು ಶವಗಳ ಪಂಚನಾಮೆ ನಡೆಸಿ, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಸಂಜೆ ಪಿಲಾಂಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ದಫನ ಮಾಡಲಾಯಿತು. ಮಕ್ಕಳ ತಂದೆಯಂದಿರು ಬುಧವಾರ ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳುವರೆಂದು ಕುಟುಂಬ ಮೂಲಗಳು ತಿಳಿಸಿವೆ. ಮಕ್ಕಳ ದುರ್ಮರಣ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.