ಲಾಟರಿ ಟಿಕೆಟ್ ಮೇಲೆ ಓಸಿ ಆಟ : ಇಬ್ಬರ ಸೆರೆ

ಮಂಗಳೂರು: ಲಾಟರಿ ಟಿಕೆಟ್ ಫಲಿತಾಂಶದ ಮೇಲೆ ಓಸಿ ಆಟ ನಡೆಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಕುಂಜತ್ತಬೈಲ್ ನಿವಾಸಿ ಅಶೋಕ್ (42) ಮತ್ತು ಬೊಂದೇಲನ ಕೃಷ್ಣನಗರದ ಕೃಷ್ಣ ನಾಯ್ಕ್(43).

ಕೇರಳದ ಲಾಟರಿ ಟಿಕೆಟ್  ಫಲಿತಾಂಶವನ್ನು ಮುಂದಿಟ್ಟುಕೊಂಡು ಇವರು ಓಸಿ ಆಟವಾಡುವ ಮೂಲಕ ಜೂಜಿನಲ್ಲಿ ತೊಡಗಿಸಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಕೇರಳ ಲಾಟರಿ ಟಿಕೆಟ್ ಫಲಿತಾಂಶದ ಮೇಲೆ ರೂ 10ರಂತೆ ಕಟ್ಟಿ ಓಸಿ ಟಿಕೆಟ್ ಬೆಟ್ಟಿಂಗ್ ಹಾಕಲು ಪ್ರಚೋದನೆ ನೀಡುತ್ತಿದ್ದು, ಸ್ಥಳೀಯ ಹಲವು ಮಂದಿ ಯುವಕರು ಇವರ ಜೂಜಿನಾಟಕ್ಕೆ ಬಲಿಯಾಗಿದ್ದರು. ಪೊಲೀಸರಿಗೆ ದೊರಕಿದ ಖಚಿತ ಮಾಹಿತಿಯಂತೆ ಅವರಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ 200 ರೂ ವಶಪಡಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳು ಓಸಿಯಲ್ಲಿ ಲಾಟರಿ ಟಿಕೆಟ್ ಫಲಿತಾಂಶದ ಮೇಲಿನ 3 ನಂಬರ್ ಮೇಲೆ ಮೇಲೆ 4500, 2ನೇ ನಂಬರ್ ಮೇಲೆ 700 ಮತ್ತು 1ನೇ ನಂಬರ್ ಮೇಲೆ 80 ರೂ. ನೀಡುವ ಆಮಿಷವೊಡ್ಡಿ ಜೂಜು ನಡೆಸುತ್ತಿದ್ದರು.