ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆ ಅವಹೇಳನ : ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಸಾಮಾಜಿಕ ಜಾಲತಾಣವಾಗಿರುವ ವಾಟ್ಸಪ್ ಗುಂಪಿನಲ್ಲಿ ಧರ್ಮ ನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮುದ್ವೇಷ ಕೆರಳಿಸುವ ಸಂದೇಶ ರವಾನಿಸಿದ ಆರೋಪದಲ್ಲಿ ಉಪ್ಪಿನಂಗಡಿಯ ಅನ್ನು ಪೂಜಾರಿ ಎಂಬವರ ಪುತ್ರ ಬಾಲಕೃಷ್ಣ ಪೂಜಾರಿ ಹಾಗೂ ಬಂಟ್ವಾಳದ ಇರಾ ಗ್ರಾಮದ ಜಗತ್ ಶೆಟ್ಟಿ ಎಂಬವರ ಪುತ್ರ ಸತೀಶ್ ಎಂಬವರನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಾಲಕೃಷ್ಣ ಪೂಜಾರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿದ್ದು, ಮೌರಿ ಹಾಗೂ ಪಣೋಲಿಬೈಲು ಎಂಬ ವಾಟ್ಸಪ್ ಗುಂಪಿನಲ್ಲಿ ಕೋಮುದ್ವೇಷ ಕೆರಳಿಸುವ ಹಾಗೂ ಮಹಿಳೆಯನ್ನು ಕೀಳು ಮಟ್ಟದಲ್ಲಿ ನಿಂದಿಸುವ ಮತ್ತು ಆಕ್ರಮಣಕಾರಿಯಾದ ಸಂದೇಶವನ್ನು ರವಾನಿಸಿದ್ದನು. ಸತೀಶ್ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದು, ಇಬ್ಬರನ್ನೂ ಬಂಧಿಸಿರುವ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಈ ಸಂದೇಶ ಇತರ ಗ್ರೂಪ್ಪುಗಳಲ್ಲಿ ವೇಗವಾಗಿ ಹರಿದಿದ್ದು, ಅಂತಹ ಸಂದೇಶಗಳಿಗಾಗಿ ಇತರ ಗುಂಪುಗಳನ್ನು ಅಡ್ಮಿನ್ ಹಾಗೂ ಸಂದೇಶ ರವಾನೆ ಮಾಡಿರುವವರನ್ನು ಸಹ ವಿಚಾರಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲತಾಣ ಸಂದೇಶಗಳ

ಮೇಲೆ ಕಠಿಣ ಕ್ರಮ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪ್ರಭಾವಿ ಜಾಲತಾಣಗಳಾಗಿರುವ ವಾಟ್ಸಪ್, ಫೇಸ್ಬುಕ್ ಸಹಿತ ಇತರ ಸಾಮಾಜಿಕ ತಾಣಗಳಲ್ಲಿ ಕೋಮು ಆಧರಿತ ಪ್ರಚೋದನಾತ್ಮಕ ಹಾಗೂ ಸುಳ್ಳು ಸುದ್ದಿ ಅತ್ಯಂತ ಪರಿಣಾಮಕಾರಿಯಾಗಿ ಹರಿದಾಡುತ್ತಿದ್ದು, ಇದು ನಾಗರಿಕ ಸಮಾಜದ ಸೌಹಾರ್ದತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸಂದೇಶ ರವಾನಿಸುವವರ ಹಾಗೂ ಗ್ರೂಪ್ ಅಡ್ಮಿನುಗಳ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕಳೆದ ಬುಧವಾರ ಬೆಂಜನಪದವು ಎಂಬಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆಯತ್ನ ನಡೆಸಲಾಗಿದೆ ಎಂಬ ಸಂದೇಶವೊಂದು ಎಲ್ಲಾ ಗುಂಪುಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಮಾಧ್ಯಮಗಳಿಗೆ ಸ್ಪಷ್ಟಪಡಿಸಿ ಇಂತಹ ಸಂದೇಶಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರು ಪೊಲೀಸರಿಗೆ ತಿಳಿಸುವಂತೆ ಕೋರಿದ್ದಾರೆ.

 

LEAVE A REPLY