ಜೆಎನ್ಯು ವಿದ್ಯಾರ್ಥಿನಿಯ ಅತ್ಯಾಚಾರಗೈದ ಇಬ್ಬರು ಅಫ್ಗಾನ್ ಯುವಕರ ಸೆರೆ

ಸಾಂದರ್ಭಿಕ ಚಿತ್ರ

ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ 21 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಅಮಲು ಪದಾರ್ಥ ಕುಡಿಸಿ ಆಕೆಯ ಮೇಲೆ ಇಬ್ಬರು ಅಫ್ಗಾನ್ ರಾಷ್ಟ್ರೀಯರು  ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಫ್ಲ್ಯಾಟ್ ಒಂದರಲ್ಲಿ ಅತ್ಯಾಚಾರ ನಡೆಸಿದ್ದು  ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ.

ಬಂಧಿತರನ್ನು ತ್ವಾಬ್ ಅಹ್ಮದ್ (27) ಹಾಗೂ ಸುಲೈಮಾನ್ ಅಹ್ಮದಿ (31) ಎಂದು ಗುರುತಿಸಲಾಗಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಂತ್ರಸ್ತೆ ಎರಡನೇ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದು  ತನ್ನ ಸ್ನೇಹಿತನೊಬ್ಬನ ಜತೆ ಹೌಝ್ ಖಸ್ ಗ್ರಾಮದ ಪಬ್ ಒಂದಕ್ಕೆ ಹೋಗಿದ್ದಾಗ ಅಲ್ಲಿ ತ್ವಾಬ್ ಪರಿಚಯವಾಗಿ ಅವರು ಮೊಬೈಲ್ ನಂಬರ್  ಪಡೆದುಕೊಂಡಿದ್ದರು.

ತ್ವಾಬ್ ಮನೆಯಲ್ಲಿ ಆಕೆ ಆತನ ಆಹ್ವಾನದ ಮೇರೆಗೆ ಸ್ನೇಹಿತನ ಜತೆ ಪಾರ್ಟಿಗೆ ಆಗಮಿಸಿದಾಗ  ಸುಲೈಮಾನ್, ಸಿದ್ಧಾಂತ್ ಹಾಗೂ ಪ್ರತ್ಯೂಷಾ ಇದ್ದರು. ಅಲ್ಲಿದ್ದ ಮಹಿಳೆ  ಸಂತ್ರಸ್ತೆಯೊಂದಿಗೆ ಮದ್ಯ ಸೇವಿಸಿದ್ದು  ಆಕೆಗೆ ಅಮಲು ಆವರಿಸುತ್ತಿದ್ದಂತೆಯೇ ಆಕೆಯ ಮೇಲೆ ಅಲ್ಲಿದ್ದ ಯುವಕರಿಬ್ಬರು ಅತ್ಯಾಚಾರ ನಡೆಸಿದ್ದರೆಂದು ದೂರಲಾಗಿದೆ.