ನಕಲಿ ನೋಟು ಮುದ್ರಣ ಜಾಲದ ಇಬ್ಬರ ಬಂಧನ

ವಿಶಾಖಪಟ್ಟಣಂ : ಇತ್ತೀಚೆಗಷ್ಟೇ ಪರಿಚಯಗೊಂಡಿರುವ 2,000 ರೂ ಮುಖಬೆಲೆಯ ಕರೆನ್ಸಿ ನೋಟು ಕೂಡಾ ಈಗ ನಕಲಿಯಾಗಿದ್ದು, ಇಲ್ಲಿನ ವ್ಯವಹಾರದಲ್ಲಿ ಪತ್ತೆಯಾಗಿದೆ.

ಬಂದರು ನಗರದ ಅರಿಲೋವಾ ಪ್ರದೇಶದಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಗ್ಯಾಂಗೊಂದರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ಕಪರಡದ ಸತ್ಯನಾರಾಯಣ (35) ಮತ್ತು ಅಕ್ಕಯಪಾಲೆಂನ ಯುಗಂಧರ್ (32) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸದಸ್ಯ ಯೆಲ್ಲಾಜಿ ತಲೆಮರೆಸಿಕೊಂಡಿದ್ದಾನೆ.

ಇನ್ನೇನು ನಕಲಿ ನೋಟು ಚಲಾವಣೆಗೆ ಬರಬೇಕೆನ್ನುವಷ್ಟರಲ್ಲಿ ಈ ಗ್ಯಾಂಗನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 2,000 ರೂ ಮುಖಬೆಲೆಯ 17 ನಕಲಿ ನೋಟು ಜಪ್ತಿ ಮಾಡಿದ್ದಾರೆ. ಜೊತೆಗೆ ನಕಲಿ ನೋಟು ಮುದ್ರಿಸಲು ಸಂಗ್ರಹಿಸಿದ್ದ ಕರೆನ್ಸಿ ಕಾಗದ ವಶಕ್ಕೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರ 1,000 ಮತ್ತು 5,00 ರೂ ನಿಷೇಧಿಸಿದ ಬಳಿಕ ಮೂವರ ಈ ಗ್ಯಾಂಗ್ ನಕಲಿ ನೋಟು ಮುದ್ರಣ ಸಂಚು ನಡೆಸಿತ್ತು.

ನೋಟು ನಿಷೇಧದ ಬಳಿ ಈ ಮೂವರು ಸೇರಿಕೊಂಡು ಸ್ಟೂಡಿಯೋದಲ್ಲೇ ನಕಲಿ ನೋಟು ಮುದ್ರಣ ಕಾರ್ಯಾರಂಭಿಸಿದ್ದರು. ಮಂಗಳವಾರದಂದು ಕೈಲಾಸಗಿರಿಯ ಪೆಟ್ರೋಲ್ ಬಂಕಿಗೆ ಆಗಮಿಸಿದ್ದ ಸತ್ಯನಾರಾಯಣ ನಕಲಿ ನೋಟು ನೀಡಿ, ಇಂಧನ ಖರೀದಿಸಿದ್ದ. ಆದರೆ ಅಲ್ಲಿನ ಕಾರ್ಮಿಕರಿಗೆ ಈತನ ಮೇಲೆ ಸಂದೇಹ ಉಂಟಾಗಿ ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಸತ್ಯನಾರಾಯಣ ಬಂಧಿಸಲ್ಪಟ್ಟಿದ್ದಾನೆ.

ವಿಚಾರಣೆ ವೇಳೆ ಆತ ನಕಲಿ ನೋಟು ಮುದ್ರಣ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದಾನೆ. ನೋಟು ಮುದ್ರಣಕ್ಕೆ ಬಳಸಲಾಗಿದ್ದ ಪ್ರಿಂಟರ್ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದರು.