ಗುಜರಾತಿನ ಸಂಘಟಿತ ಕ್ಷೇತ್ರದಲ್ಲಿ 19 ಲಕ್ಷ ನಿರುದ್ಯೋಗಿಗಳು

ಮುಂಬರುವ ಗುಜರಾತ್ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಿರುವ ಬಗ್ಗೆ ನೀಡಿರುವ ಅಂಕಿಅಂಶಗಳನ್ನು ಅಧ್ಯಯನ ಸಂಸ್ಥೆಯೊಂದು ನಿರಾಕರಿಸಿದೆ. 2014-15ರಲ್ಲಿ ರಾಜ್ಯದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಶಿಖರ ಸಮ್ಮೇಳನದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ್ದ 43.44 ಲಕ್ಷ  ಉದ್ಯೋಗಾಕಾಂಕ್ಷಿಗಳ ಪೈಕಿ ಕೇವಲ 24.41 ಲಕ್ಷ ಜನರು ಮಾತ್ರವೇ ಉದ್ಯೋಗ ಗಳಿಸಿದ್ದು, 19 ಲಕ್ಷ ಜನ ನಿರುದ್ಯೋಗಿಗಳಾಗಿಯೇ ಇದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತೀಚೆಗೆ ತಮ್ಮ ಹೇಳಿಕೆಯೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್ಯದಲ್ಲಿ ಕೇವಲ ಆರು ಲಕ್ಷ ನಿರುದ್ಯೋಗ ಇದೆ ಎಂದು ಹೇಳಿರುವುದನ್ನು ನಿರಾಕರಿಸಿರುವ ಅರ್ಥಶಾಸ್ತ್ರಜ್ಞ ಪ್ರೊ ಹೇಮಂತ್ ಷಾ, ಉದ್ಯೋಗ ವಿನಿಮಯ ಕೇಂದ್ರಗಳ ಅಧಿಕೃತ ಅಂಕಿಅಂಶಗಳನ್ನು ಆಧರಿಸಿಯೇ ಹೇಳುವುದಾದರೆ ರಾಜ್ಯದಲ್ಲಿ 19 ಲಕ್ಷ ನಿರುದ್ಯೋಗಿಗಳಿರುವದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 2015-16ರಲ್ಲಿ ನೋಂದಣಿಯಾದ ಆಕಾಂಕ್ಷಿಗಳ ಸಂಖ್ಯೆ 6.11ರಷ್ಟಿದ್ದರೂ ಉದ್ಯೋಗ ದೊರೆತಿದ್ದು, ಕೇವಲ ಶೇ 35ರಷ್ಟು ಜನರಿಗೆ ಮಾತ್ರ, 1.77 ಲಕ್ಷ ಎಂದು ಹೇಮಂತ್ ಹೇಳಿದ್ದಾರೆ.

ಉದ್ಯೋಗಕ್ಕಾಗಿ ನೋಂದಣಿ ಮಾಡಿಸುವ ಬಹುತೇಕ ಜನರು ಕುಶಲಕರ್ಮಿಗಳಾಗಿದ್ದು, ಈ ಬವಣೆ ಸಂಘಟಿತ ಕ್ಷೇತ್ರದಲ್ಲಿ ಮಾತ್ರ ಕಂಡುಬರುತ್ತದೆ. ಅಸಂಘಟಿತ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯ ಯಾವುದೇ ಅಂಕಿಅಂಶಗಳು ದೊರೆಯುತ್ತಿಲ್ಲ ಎಂದು ಹೇಮಂತ್ ಆರೋಪಿಸಿದ್ದಾರೆ. ಭಾರತದಲ್ಲಿ ಮತ್ತು ಗುಜರಾತಿನಲ್ಲಿ ಶೇ 90ರಷ್ಟು ಕಾರ್ಮಿಕರು ಅಸಂಘಟಿತ ಕ್ಷೇತ್ರದಲ್ಲಿದ್ದು, ಇದರಲ್ಲಿ ಕೃಷಿ ಕ್ಷೇತ್ರವೂ ಒಳಪಟ್ಟಿದೆ ಎಂದು ಹೇಳಿದ್ದಾರೆ. 2003ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮ್ಮೇಳನದ ಹಿನ್ನೆಲೆಯಲ್ಲಿ ಘೋಷಿಸಲಾದ ಉದ್ಯೋಗ ಸೃಷ್ಟಿಯ ಗುರಿಯನ್ನು ಮುಟ್ಟಲು ಸರ್ಕಾರ ವಿಫಲವಾಗಿರುವುದು ಸ್ಪಷ್ಟವಾಗಿದೆ. ರಾಜ್ಯದ ಕೈಗಾರಿಕೆಗಳಲ್ಲಿ ಮತ್ತು ಟಾಟಾ ನ್ಯಾನೋ ಘಟಕದಲ್ಲಿ ಲಭ್ಯವಿರುವ ಹುದ್ದೆಗಳ ಪೈಕಿ ಶೇ 85ರಷ್ಟನ್ನು ಸ್ಥಳೀಯರಿಗೇ ನೀಡುವ ಬಿಜೆಪಿ ಸರ್ಕಾರದ ಆಶ್ವಾಸನೆಯೂ ಹುಸಿಯಾಗಿದೆ. ಕೈಗಾರಿಕೆಗಳಿಗೆ ಕೋಟ್ಯಂತರ ರೂ.ಗಳ ರಿಯಾಯಿತಿಯನ್ನು ನೀರು ಸರಬರಾಜು, ವಿದ್ಯುತ್ ಸೌಲಭ್ಯ ಮತ್ತು ಭೂಸ್ವಾಧೀನದ ಮೂಲಕ ಒದಗಿಸಲಾಗುತ್ತಿದೆ. ಈ ಉದ್ಯಮಿಗಳ ಒಟ್ಟು ಉತ್ಪಾದನೆ ರಾಜ್ಯದ ಒಟ್ಟು ಉತ್ಪಾದನೆಯ ಶೇ 50ಕ್ಕಿಂತಲೂ ಕಡಿಮೆ ಇದೆ ಎಂದು ಹೇಮಂತ್ ಆರೋಪಿಸಿದ್ದಾರೆ.

 

LEAVE A REPLY