ರೈಲು ತಡೆದ 17 ಮಂದಿ ವಿರುದ್ದ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಕೋಡಿಂಬಾಳದಲ್ಲಿ ರೈಲು ನಿಲುಗಡೆಗಾಗಿ ಆಗ್ರಹಿಸಿ ಎಕ್ಸ್‍ಪ್ರೆಸ್ ರೈಲು ತಡೆದು ಶುಕ್ರವಾರ ಪ್ರತಿಭಟನೆ ಮಾಡಿದ 17 ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿರುವ ರೈಲ್ವೇ ಇಲಾಖಾಧಿಕಾರಿಗಳ ನಡೆ ಸರಿಯಲ್ಲ ಎಂದು ಕೋಡಿಂಬಾಳ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು.

ಈ ಸಂಬಂಧ ಅವರು ಕಡಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ “ಪ್ರತಿಭಟನೆಯ ಕುರಿತು 25 ದಿನಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ, ರೈಲ್ವೇ ಮೈಸೂರು ಡಿವಿಜನಲ್ ಮ್ಯಾನೇಜರ್ ಅವರಿಗೆ ಮುಖತಃ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೈಲ್ವೇ ಅಧಿಕಾಗಳು ಶುಕ್ರವಾರ ಪ್ರತಿಭಟನೆಯ ವೇಳೆ ಹೋರಾಟಗಾರರ ಮನವಿ ಸ್ವೀಕರಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು. ಪ್ರಜಾಸತ್ತಾತ್ಮಕ ಶೈಲಿಯಲ್ಲಿ ಹೋರಾಟ ನಡೆಸಿದರೆ, ರೈಲ್ವೇ ಪೋಲೀಸರು ಹೋರಾಟಗಾರರ ವಿರುದ್ಧ ಸುಳ್ಳು ಆರೋಪ ಮಾಡಿ ದುರ್ನಡತೆಯಿಂದ ಪ್ರಕರಣ ದಾಖಲಿಸಿರುವುದು ಖಂಡನೀಯ” ಎಂದರು.

ಕೋಡಿಂಬಾಳ ರೈಲ್ವೇ ನಿಲ್ದಾಣದ ಅಭಿವೃದ್ಧಿ ಹಾಗೂ ಎಕ್ಸ್‍ಪ್ರೆಸ್ ನಿಲುಗಡೆಗಾಗಿ ಎರಡು ಸಾವಿರಕ್ಕೂ ಅಧಿಕ ಹೋರಾಟಗಾರರು ತಮ್ಮ ಹಕ್ಕಿನ ಬಗ್ಗೆ ಶಾಂತಿಯುತವಾಗಿ ಹೋರಾಟ ನಡೆಸಿದ್ದರೆ ಇದೀಗ 17 ಮಂದಿಯ ವಿರುದ್ದ ಪ್ರಕರಣ ದಾಖಲುಗೊಳಿಸಿದ್ದಾರೆ.

“ನಮ್ಮ ಮೇಲೆ ಸುಳ್ಳು ಆರೋಪದೊಂದಿಗೆ ಪ್ರಕರಣ ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಖಾಸಗಿ ದೂರು ದಾಖಲಿಸುತ್ತೇವೆ, ಪೋಲೀಸ್ ಠಾಣೆಯಲ್ಲಿ ಫಿರ್ಯಾದ್ ಸಲ್ಲಿಸುತ್ತೇವೆ” ಎಂದು ಹೇಳಿದ ಮೀರಾ ಸಾಹೇಬ್, “ಕೋಡಿಂಬಾಳ ರೈಲ್ವೇ ನಿಲ್ದಾಣ ಅಭಿವೃದ್ಧಿಗಾಗಿ 2008ರಲ್ಲಿ ರೈಲ್ವೇ ಬಜೆಟ್‍ನಲ್ಲಿ 1.80 ಕೋಟಿ ರೂ ಮೀಸಲಿಡಲಾಗಿತ್ತು. ಹಾಗೂ ತುರ್ತು ದುರಸ್ಥಿಗಾಗಿ 4.50 ಲಕ್ಷ ರೂ ಬಿಡಿಗಡೆಯಾಗಿತ್ತು ಎನ್ನುವ ಬಗ್ಗೆ ಮಾಹಿತಿ ಇದೆ, ಆದರೆ ದುರಸ್ತಿಯಾಗಲಿ ಅಭಿವೃದ್ಧಿಯಾಗಲಿ ಮಾಡದೆ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಳುಂ ಮಾಡಿದ್ದಾರೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಮಾತ್ರವಲ್ಲ ನಮಗೆ ನೀಡಿದ ಭರವಸೆಯಂತೆ ಮೂರು ತಿಂಗಳಲ್ಲಿ ಕೋಡಿಂಬಾಳ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿಪಡಿಸದಿದ್ದರೆ ಮತ್ತೆ ಉಗ್ರ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದರು.

ಜೀವ ನದಿ ರಕ್ಷಣೆಗಾಗಿ ಎತ್ತಿನ ಹೊಳೆ ಹೋರಾಟಕ್ಕೆ ಬೆಂಬಲ:

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಸೂರ್ಯನಾರಾಯಣ ಭಟ್ ಪಟ್ರೋಡಿ, ಪಿ ಟಿ ಸೈಮನ್ ಕೋಡಿಂಬಾಳ, ಜನಾರ್ಧನ ಗೌಡ ಪಣೆಮಜಲು, ತಮ್ಮಯ್ಯ ಗೌಡ ಕುತ್ಯಾಡಿ, ಸುಂದರ ಗೌಡ ಬಳ್ಳೇರಿ, ಎಲ್ಸಿ ತೋಮಸ್ ಕುಟ್ರುಪ್ಪಾಡಿ, ಶಿವರಾಮ ಗೌಡ ಕಲ್ಕಳ ಮೊದಲಾದವರು ಉಪಸ್ಥಿತರಿದ್ದರು.