‘ಶೀಘ್ರದಲ್ಲೇ ನಗರದಲ್ಲಿ ಉಳಿದ 14 ಕೆಎಸ್ಸಾರ್ಟಿಸಿ ಬಸ್ ಓಡಾಟ’

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಖಾಸಗಿ ಬಸ್ಸು ಮಾಲಕರಿಂದ ಎದುರಾದ ತಡೆ ಆದೇಶವನ್ನು ನಿವಾರಿಸಿ ಎರಡು ವಾರದೊಳಗೆ  ನಗರದ ಇನ್ನುಳಿದ 14 ರಸ್ತೆಗಳಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳ ಓಡಾಟ ಆರಂಭಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭರವಸೆ ನೀಡಿದೆ.

ಶುಕ್ರವಾರ ನಗರದಲ್ಲಿ ನಡೆದ ಸಾರಿಗೆ ಅದಾಲತಿನಲ್ಲಿ ಕಾರ್ಯಕರ್ತ ಜಿ ಕೆ ಭಟ್ ಈ ಸಂಬಂಧ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಆಯುಕ್ತ ವಿವೇಕಾನಂದ ಹೆಗ್ಡೆ, ತಡೆಯಾಜ್ಞೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಹೊಸ ಬಸ್ಸುಗಳು ಮುಂದಿನ ಕೆಲವೇ ವಾರಗಳಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

35 ಬಸ್ಸುಗಳು ಜಾರಿ

ಜವಹರಲಾಲ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಅಡಿಯಲ್ಲಿ ನಗರಕ್ಕೆ ಸುಮಾರು 35 ಬಸ್ಸುಗಳನ್ನು ಸಂಚಾರಕ್ಕೆ ನಿಯುಕ್ತಗೊಳಿಸಲಾಗಿದೆ. ಇದೇ ವೇಳೆ 21 ಕೆಎಸ್ಸಾರ್ಟಿಸಿ ಬಸ್ಸುಗಳು  ಆರ್ಟಿಎ ಅನುಮತಿಯಂತೆ ನಗರದ ವಿವಿಧ ರಸ್ತೆಗಳಲ್ಲಿ ಈಗಾಗಲೇ ಓಡಾಟವನ್ನು ಆರಂಭಿಸಿವೆ. ಖಾಸಗಿ ಬಸ್ಸು ನಿರ್ವಾಹಕರು ಆರ್ಟಿಎ 14 ಬಸ್ಸುಗಳಿಗೆ ನೀಡಿದ ಅನುಮತಿ ಪತ್ರದಲ್ಲಿ ಆರ್ಟಿಎ ಸದಸ್ಯರಾದ ಪೊಲೀಸ್ ಸುಪರಿಂಡೆಂಟ್ ಸಹಿ ಇಲ್ಲದಿರುವುದನ್ನು ಪ್ರಶ್ನಿಸಿ  ತಡೆಯಾಜ್ಞೆ ವಿಧಿಸುವಂತೆ ಹೈಕೋರ್ಟು ಮುಂದೆ  ಅರ್ಜಿ ಸಲ್ಲಿಸಿದ್ದರು. ಈ ತಾಂತ್ರಿಕ ಕಾರಣದ ಆಧಾರದಲ್ಲಿ ಕೋರ್ಟು ತಡೆಯಾಜ್ಞೆ ನೀಡಿತ್ತು.

ಆದೇಶಕ್ಕೆ ಆರ್ಟಿಎ ಸದಸ್ಯರಾದ ಪೊಲೀಸ್ ಸುಪರಿಂಟೆಂಡೆಂಟ್ ಸಹಿ ಹಾಕಿಸದೆ ಖಾಸಗಿ ಬಸ್ಸು ಮಾಲಕರಿಗೆ ಸಾರಿಗೆ ಇಲಾಖೆ ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ, ಈ ಮೂಲಕ  ತಡೆಯಾಜ್ಞೆ ಕೋರಿ ದಾವೆ ಹೂಡಲು ಖಾಸಗಿ ಬಸ್ಸು ಮಾಲಕರಿಗೆ ನೆರವಾಗಿದ್ದಾರೆ, ಜನರ ಹಿತಾಸಕ್ತಿಗೆ ವಿರುದ್ದವಾಗಿ ನಡೆಯುವ ಇಂತಹ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಹನುಮಂತ ಕಾಮತ್ ಹೇಳಿದ್ದಾರೆ.

ನಗರದಲ್ಲಿ ಕೆಎಸ್ಸಾರ್ಟಿಸಿಯಿಂದ ಇನ್ನೆರಡು ಹೆಚ್ಚು ಬಸ್ಸುಗಳನ್ನು ಓಡಿಸುವಂತೆ ಕೋರಿ ಸಾರಿಗೆ ಅದಾಲತಿನಲ್ಲಿ ಒಂದೆರಡು ಮನವಿಗಳು ಕೇಳಿಬಂದವು.

ಬಜಾಲ್ ಮತ್ತು ಫೈಸಲ್‍ನಗರ ನಡುವೆ ಕೆಎಸ್ಸಾರ್ಟಿಸಿ ಬಸ್ಸು ಓಡಾಟ ಆರಂಭಿಸಬೇಕೆಂದು ಪಾಲಿಕೆ ಸದಸ್ಯ ಅಬ್ದುಲ್ ರವೂಫ್ ಬೇಡಿಕೆ ಮುಂದಿಟ್ಟರು. ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತಣ್ಣೀರುಬಾವಿಗೆ ಕೆಎಸ್ಸಾರ್ಟಿಸಿ ಬಸ್ಸು ಬೇಕೆಂದರು. ಇನ್ನೊಬ್ಬ ಗ್ರಾಮ ಪಂಚಾಯತ್ ಸದಸ್ಯರು ಬೋಂದೇಲ್ ಮತ್ತು ಮೂಡುಶೆಡ್ಡೆ ನಡುವೆ ಜಾರಬೆಟ್ಟು ಮುಖಾಂತರ ಕೆಎಸ್ಸಾರ್ಟಿಸಿ ಬಸ್ಸು ಓಡಾಟ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಅದಾಲತಿನಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಸದಸ್ಯರು ನಗರ ಬಸ್ಸುಗಳ ಕಳಪೆ ಗುಣಮಟ್ಟದ ಸೇವೆಯ ವಿರುದ್ದ ಧ್ವನಿ ಎತ್ತಿದ್ದು, ಇವುಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.