ಅಧಿಕಾರಿ ಕೊಲೆ ಯತ್ನ : 14 ಮಂದಿ ಅರೆಸ್ಟ್

150 ಲೋಡ್ ಮರಳು ವಶ, 8 ಬೋಟ್ ಮುಟ್ಟುಗೋಲು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್ ಮತ್ತು ಇತರೆ ಅಧಿಕಾರಿಗಳ ಮೇಲೆ ನಡೆಸಿದ ಕೊಲೆ ಯತ್ನ ಕೇಸಿಗೆ ಸಂಬಂಧಪಟ್ಟಂತೆ ಇದುವರೆಗೆ ಒಟ್ಟು 14 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ವರಿಷ್ಟಾಧಿಕಾರಿ ಬಾಲಕೃಷ್ಣ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ನಂತರ ಅಕ್ರಮ ಮರಳು ಅಡ್ಡೆಗಳಿಗೆ ಬಿಗು ಕಡಿವಾಣ ಹಾಕಲು ಕಾರ್ಯಾಚರಣೆ ಶುರು ಮಾಡಲಾಗಿದೆ. ಈವರೆಗೆ ಸುಮಾರು 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟುಗಳನ್ನು ಮುಟ್ಟುಗೋಲು ಹಾಕಲಾಗಿದೆ. ದಾಳಿಗೆ ಒಳಪಟ್ಟಿರುವ ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು, ಎಂದು ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಹಾಕಲಾಗಿದ್ದರೆ 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಮಿಕ್ಕುಳಿದ ಆರೋಪಿಗಳ ಬಂಧನಕ್ಕೆ ಪೆÇಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.