ಕಮಿಷನ್ ಆಧಾರದಲ್ಲಿ ನೋಟು ಬದಲಾವಣೆ : 2 ಆರೋಪಿಗಳ ಸೆರೆ, 13 ಲಕ್ಷ ರೂ ವಶ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಕ್ರಮವಾಗಿ ರೂ 13 ಲಕ್ಷ ನಗದು ಹಣ ಹೊಂದಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇವರಿಬ್ಬರೂ ಕಮಿಷನ್ ಆಧಾರದಲ್ಲಿ ಹಳೆಯ ನೋಟು ವಿನಿಮಯ ಮಾಡುತ್ತಿದ್ದರು ಎಂಬ ಶಂಕೆ ಬಲವಾಗಿದೆ.

ನೋಟು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಕಪ್ಪು ಹಣವನ್ನು ಬಿಳಿಯನ್ನಾಗಿ ಮಾಡುವ ದಂಧೆಯಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪುತ್ತೂರು ನಿವಾಸಿ ಉಮ್ಮರ್ ಫಾರೂಕ್ (41) ಮತ್ತು ಬಂಟ್ವಾಳ ಮೂಡ ನಿವಾಸಿ ಮೊಹಮ್ಮದ್ ಬಶೀರ್ (32) ಎಂಬವರನ್ನು ಪೊಲೀಸರು ಬಂಧಿಸುವ ವೇಳೆ ಇವರ ಬಳಿ ಹೊಸದಾಗಿ ಬಂದಿದ್ದ 2000 ರೂ, 100 ರೂ ಮತ್ತು 50 ರೂ ಮುಖಬೆಲೆಯ ನೋಟುಗಳು ಸಿಕ್ಕಿದ್ದು, ನೋಟು ನಿಷೇಧದಿಂದಾಗಿ ಮೌಲ್ಯ ಕಳೆದುಕೊಂಡಿರುವ 500 ಮತ್ತು 1000 ರೂ ನೋಟುಗಳ ವಿನಿಮಯ ವ್ಯವಹಾರವನ್ನು ಕಮಿಷನ್ ಆಧಾರದಲ್ಲಿ ಇವರು ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ನಗರದ ನವಭಾರತ್ ಸರ್ಕಲ್ ಬಳಿಯ ಅಪಾರ್ಟುಮೆಂಟ್ ಬಳಿ ಮಾರುತಿ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇದ್ದ ಇವರಿಬ್ಬರನ್ನೂ ಸಿಸಿಬಿ ಪೊಲೀಸರು ಬಂಧಿಸಿದ ವೇಳೆ ಇವರ ಬಳಿ 13 ಲಕ್ಷ ರೂ ನಗದು ಹಣ ಪತ್ತೆಯಾಗಿದ್ದು, ಅವರ ಬಳಿ ದಾಖಲೆಯೂ ಇರಲಿಲ್ಲ ಹಾಗೂ  ಸ್ಪಷ್ಟ ಮಾಹಿತಿಯನ್ನೂ ನೀಡಲು ಇವರು ನಿರಾಕರಿಸಿದ್ದರು.