ಕೀಟನಾಶಕ ಬಳಕೆಯಿಂದ 45 ರೈತರ ಸಾವು : 12 ಗೋದಾಮುಗಳಿಗೆ ದಾಳಿ

ನಾಗಪುರ : ವಿದರ್ಭ ಪ್ರಾಂತ್ಯದಲ್ಲಿ ತಮ್ಮ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿದ 45 ಮಂದಿ ರೈತರ ಸಾವಿನ ಹಿನ್ನೆಲೆಯಲ್ಲಿ  ರಾಜ್ಯ ಕೃಷಿ ಇಲಾಖೆಯ  ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ಪುಣೆಯ ಕೃಷಿ ಕಮಿಷನರೇಟ್ ಅಧಿಕಾರಿಗಳ ಸಹಯೋಗದೊಂದಿಗೆ  ಬುಧವಾರ ಪಶ್ಚಿಮ ವಿದರ್ಭಾದ ಅಕೋಲಾ ಎಂಬಲ್ಲಿ ಕೀಟನಾಶಕ ಕಂಪೆನಿಗಳ  ಒಟ್ಟು 12 ಗೋದಾಮುಗಳಿಗೆ ದಾಳಿ  ನಡೆಸಿ  ರೂ 14.31 ಕೋಟಿ ಮೌಲ್ಯದ ಕೀಟನಾಶಕಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ ಗೋದಾಮುಗಳಿಗೆ ಬೀಗ ಹಾಕಿಸಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಿನಿಂದ  ಕೀಟನಾಶಕದಿಂದಾಗಿ 45 ರೈತರು ಸಾವಿಗೀಡಾಗಿದ್ದರೆ ವಿದರ್ಭ ಪ್ರಾಂತ್ಯದ ಯವತ್ಮಲ್ ಎಂಬ ಪ್ರಮುಖ ಹತ್ತಿ ಬೆಳೆ ಬೆಳೆಯುವ ಜಿಲ್ಲೆಯಲ್ಲಿ ಅತೀ ಹೆಚ್ಚು ಸಾವುಗಳು ದಾಖಲಾಗಿದ್ದವು. ಇದೇ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳೂ ಸಾಕಷ್ಟು ಸುದ್ದಿಯಾಗಿದ್ದವು.