ನಕಲಿ ಬಂಗಾರ ಅಡವಿಟ್ಟ ಪ್ರಕರಣ : ಆರೋಪಿಗಳ ಸಂಖ್ಯೆ 12ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದು ವಂಚಿಸಿದ ಆರೋಪಿಗಳ ಸಂಖ್ಯೆ 12ಕ್ಕೆ ಏರಿದೆ.

ಬ್ಯಾಂಕ್ ನೇಮಿಸಿದ್ದ ಅಕ್ಕಸಾಲಿಗ ಮಲ್ಲಾಪುರದ ನಿವಾಸಿ ರಾಜಕುಮಾರ ಶೇಟ್ ಸಹಕಾರದಲ್ಲಿ ನಾಲ್ವರು ಸಾಲಗಾರರು ನಕಲಿ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು 6.77 ಲಕ್ಷ ರೂ ಸಾಲ ಪಡೆದು ವಂಚಿಸಿರುವ ಬಗ್ಗೆ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೈಲಜಾ ಎ ಜೆ ಮಲ್ಲಾಪುರ ಠಾಣೆಯಲ್ಲಿ ಸೋಮವಾರ ದೂರು ಸಲ್ಲಿಸಿದರು.  ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಬ್ಯಾಂಕಿನಲ್ಲಿ ಅಡವಿಟ್ಟ ಎಲ್ಲಾ ಬಂಗಾರದ ಆಭರಣಗಳ ಪರೀಕ್ಷೆ ಸಹ ನಡೆಸಿದ್ದರು. ಹಾಗಾಗಿ ವಂಚಿಸಿದವರ ಸಂಖ್ಯೆ 4ರಿಂದ 12ಕ್ಕೆ ಏರಿದ್ದು, 10ರಿಂದ 12 ಜನ ನಕಲಿ ಬಂಗಾರ ಇಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಇವರಿಂದ 60ರಿಂದ 65 ಲಕ್ಷ ರೂ ವಂಚನೆಯಾಗಿದೆ ಎನ್ನಲಾಗುತ್ತಿದೆ. ನಕಲಿ ಬಂಗಾರ ಇಟ್ಟು ಸಾಲ ಪಡೆದವರಲ್ಲಿ ಕೆಲವರು ಸಾಲವನ್ನು ಮರುಪಾವತಿಸುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಅವರ ಮೇಲೆ, ಅವರಿಟ್ಟ ನಕಲಿ ಬಂಗಾರದ ಆಭರಣಗಳ ಮೇಲೆ ಅನುಮಾನ ಇರಲಿಲ್ಲ.

ನಾಲ್ಕಾರು ದಿನಗಳ ಹಿಂದೆ ನಾಲ್ವರು ಸಾಲವನ್ನು ಮರುಪಾವತಿಸದೇ, ಬಡ್ಡಿಯನ್ನು ಕಟ್ಟದೇ ತಪ್ಪಿಸಿಕೊಳ್ಳುತ್ತಿದ್ದಾಗ ಅವರು ಅಡವಿಟ್ಟ ಆಭರಣಗಳ ಹರಾಜಿಗಾಗಿ ಪರೀಕ್ಷಿಸಿದಾಗ ನಕಲಿ ಬಂಗಾರವನ್ನು ಅಡವಿಟ್ಟಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕಿನಲ್ಲಿ ಬಂಗಾರ ಅಡವಿಟ್ಟವರ ಎಲ್ಲಾ ಆಭರಣಗಳ ಸಾಚಾತನ ಪರೀಕ್ಷೆ ಮುಂದುವರಿದಿತ್ತು. ಹೀಗೆ ಪರೀಕ್ಷೆ ಮಾಡುವ ವೇಳೆ ಮತ್ತೆ 10ರಿಂದ 12 ಪ್ರಕರಣಗಳಲ್ಲಿ ನಕಲಿ ಬಂಗಾರ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.