ಮಕ್ಕಳ ಕಳ್ಳಸಾಗಾಟ ಜಾಲದ 11 ಮಂದಿಯ ಬಂಧನ

ಮೈಸೂರು :  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದ ಮಕ್ಕಳ ಕಳ್ಳ ಸಾಗಾಟ ಜಾಲವೊಂದನ್ನು ಬೇಧಿಸಿರುವ ಮೈಸೂರು ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂಪಾಯಿ ನಗದು ಸಹಿತ  57 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಮಕ್ಕಳ ಅಪಹರಣ ಜಾಲ ಸಕ್ರಿಯವಾಗಿದೆಯೆಂಬ ವದಂತಿ ಹಬ್ಬಿ ಆತಂಕ ಸೃಷ್ಟಿಸಿದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.

“ಈ ಜಾಲದ ಸದಸ್ಯರು ಬಡ ಜನರನ್ನು ತಮ್ಮತ್ತ ಸೆಳೆದು ಅವರ ಮಕ್ಕಳನ್ನು  ದೇಶದ ವಿವಿಧೆಡೆಗಳಲ್ಲಿರುವ ಹಾಗೂ ವಿದೇಶಗಳಲ್ಲಿರುವ ಮಕ್ಕಳಿಲ್ಲದ ದಂಪತಿಗಳಿಂದ  ರೂ 1 ಲಕ್ಷದಿಂದ ರೂ 4 ಲಕ್ಷದ ತನಕ ಪಡೆದು ಮಾರಾಟ ಮಾಡುತ್ತಿದ್ದರು. ಅಂದವಾಗಿದ್ದ ಮಕ್ಕಳನ್ನಂತೂ ಇನ್ನೂ ಹೆಚ್ಚಿನ ದರಗಳಿಗೆ ಮಾರಾಟ ಮಾಡಲಾಗುತ್ತಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.

“ನಂಜನಗೂಡಿನಲ್ಲಿ ಒಂಬತ್ತು ತಿಂಗಳು ಪ್ರಾಯದ  ಮಗುವೊಂದರ ಅಪಹರಣ ಪ್ರಕರಣ ವರದಿಯಾದಾಗಲೇ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದ ಈ ಅಕ್ರಮ ದಂಧೆ ಬೆಳಕಿಗೆ ಬಂದಿತ್ತು. ಇಲ್ಲಿಯತನಕ ಒಂಬತ್ತು ಮಂದಿ ಹುಡುಗಿಯರೂ ಸೇರಿದಂತೆ ಒಟ್ಟು 16 ಮಕ್ಕಳನ್ನು ರಕ್ಷಿಸಲಾಗಿದೆ. ಎಲ್ಲ ಮಕ್ಕಳೂ 25 ದಿನಗಳಿಂದ ಹಿಡಿದು ಆರು ವರ್ಷದ ಪ್ರಾಯದವರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೀಗೆ ಅಕ್ರಮವಾಗಿ ದತ್ತು ನೀಡಲ್ಪಟ್ಟ ಹೆಚ್ಚಿನ ಮಕ್ಕಳು ನಾಸಿಂ ಮತ್ತು ಅರವಿಂದ್ ಆಸ್ಪತ್ರೆಯಲ್ಲಿ ಹುಟ್ಟಿದ್ದರು. “ಶಿಶುಗಳು ಮರಣ ಹೊಂದಿವೆ ಎಂದು ಈ ಆಸ್ಪತ್ರೆಗಳು ಘೋಷಿಸಿದ ನಂತರ ಅವುಗಳನ್ನು ಅಕ್ರಮವಾಗಿ ದತ್ತು ನೀಡಲಾಗಿದೆ. ಮೊದಲು ಈ ರೀತಿಯಾಗಿ ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ಮದನಲಾಲ್ ಎಂಬ ವ್ಯಕ್ತಿ ನಂತರ ಈ ಜಾಲದ ಏಜಂಟ್ ಆಗಿದ್ದ. ಜಾಲದ ಒಬ್ಬ ಸದಸ್ಯ ರವಿಚಂದ್ರ ತನ್ನ ಸ್ವಂತ ಪುತ್ರಿಯನ್ನೇ ಮಾರಾಟ ಮಾಡಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕಾದ ಸೆರೀನ್ ಎಂಬ ಮಹಿಳೆಗೆ ಮಾರಾಟವಾದ ಮಗುವೊಂದನ್ನು ಪತ್ತೆ ಹಚ್ಚಲಾಗಿದೆ. ಇನ್ನೊಂದು ಮಗುವನ್ನು ಕೇರಳದಿಂದ ಕೆನ್ಯಾ ದೇಶಕ್ಕೆ ರವಾನೆ ಮಾಡಿರಬಹುದೆಂದು ತಿಳಿದುಬಂದ ಕಾರಣ ಪೊಲೀಸ್ ತಂಡವೊಂದು ಅಲ್ಲಿಗೆ ಸದ್ಯದಲ್ಲಿಯೇ ತೆರಳುವ ಸಾಧ್ಯತೆಯಿದೆ.

ಐಷಾರಾಮಿ ಜೀವನ ನಡೆಸಲು ಸುಲಭವಾಗಿ ಹಣ ಗಳಿಸುವ ವಿಧಾನವಾಗಿ ಈ ರೀತಿಯಾಗಿ ಮಕ್ಕಳ ಕಳ್ಳಸಾಗಾಟ ನಡೆಸಲಾಗುತ್ತಿತ್ತು ಎಂದು ಎಸ್ಪಿ ರವಿ ಡಿ ಚೆನ್ನನ್ನವರ್ ಹೇಳಿದ್ದಾರೆ.